ಕೋವಿಡ್​-19 ಪೀಡಿತರಲ್ಲಿ 86 ಜನ ಗುಣಮುಖ

corona-virus_1580141672
Published on

ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿರುವವರ ಸಂಪರ್ಕ ಅಸಾಧ್ಯವೇ ಸರಿ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಯನ್ನು ಬಿಟ್ಟರೆ ಇನ್ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ ಸೋಂಕಿಗೆ ಒಳಗಾದವರಿಗಿಂತ ಅವರ ಕುಟುಂಬದವರ ಆತಂಕ ಹೆಚ್ಚೇ ಎನ್ನಬಹುದು.

ವಿದೇಶದಿಂದ ಹಿಂದಿರುಗಿಯೋ ಅಥವಾ ಇನ್ನಾವುದೋ ಕಾರಣಕ್ಕೆ ಗೃಹಬಂಧನಕ್ಕೆ (ಕ್ವಾರಂಟೈನ್​) ಒಳಗಾದವರ ಮನೆಯ ಅಕ್ಕಪಕ್ಕದವರೇ ಹೆಚ್ಚಿನ ಆತಂಕಕ್ಕೆ ಗುರಿಯಾಗಿರುವಾಗ ಇನ್ನು ಕುಟುಂಬದವರು ಅನುಭವಿಸುವ ಸಂಕಷ್ಟ ಊಹಿಸಲೂ ಅಸಾಧ್ಯ. ಆದರೆ, ಸೋಂಕಿತರು ಕೂಡ ಸಂತೋಷ ಪಡುವ ಸುದ್ದಿ ಇಲ್ಲಿದೆ.

ದೇಶದಲ್ಲಿ ಕರೊನಾ ಸೋಂಕಿಗೆ ಒಳಗಾದವರ ಒಟ್ಟಾರೆ ಸಂಖ್ಯೆ ಭಾನುವಾರ ಸಂಜೆ ವೇಳೆಗೆ 979 ಆಗಿದೆ. ಇದರಲ್ಲಿ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 867. ಮೃತರ ಸಂಖ್ಯೆ 25 ಹಾಗೂ ಗುಣಮುಖವಾದ 86 ಜನರು ಸೇರಿದ್ದಾರೆ. ಅಂದರೆ, ಈ ಸೋಂಕಿತರ ಪೈಕಿ ಶೇ.10 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಹೌದು... ಕೋವಿಡ್- 19 ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 86 ಜನರು ಗುಣಮುಖರಾಗಿದ್ದಾರೆ. ಇವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಸೋಂಕಿಗೆ ಒಳಗಾಗಿ ಸಾವಿನ ಪ್ರಮಾಣ ಪ್ರಸ್ತುತ ಶೇ.2ಕ್ಕಿಂತ ಕಡಿಮೆ ಇದೆ ಎಂಬುದನ್ನು ಅಂಕಿ-ಅಂಶಗಳೇ ಸ್ಪಷ್ಟಪಡಿಸುತ್ತವೆ..

ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳು ಕರೊನಾ ಸೋಂಕಿನಿಂದಾಗಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿವೆ. ಇವೆರಡೂ ರಾಜ್ಯಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ 200 ತಲುಪುತ್ತಿದೆ. ಅಂತೆಯೇ ಮಹಾರಾಷ್ಟ್ರದಲ್ಲಿ 25 ಜನರು ಗುಣಮುಖರಾಗಿದ್ದಾರೆ. ಕೇರಳದಲ್ಲಿ ಗುಣಮುಖರಾದವರ ಸಂಖ್ಯೆ 15 ಎಂಬುದು ಕೂಡ ಆಶಾದಾಯಕ ಬೆಳವಣಿಗೆ.

ಇನ್ನು, ಕರ್ನಾಟಕದಲ್ಲಿ ಈವರೆಗೆ ಭಾನುವಾರದವರೆಗೆ 76 ಜನರಿಗೆ ಸೋಂಕು ಕಂಡುಬಂದಿದೆ.. ಇವರಲ್ಲಿ ಐವರು ಗುಣಮುಖರಾಗಿದ್ದಾರೆ. ಹೀಗಾಗಿ ಸೋಂಕಿಗೆ ಒಳಗಾದವರು ಆತಂಕಕ್ಕೆ ಒಳಗಾಬೇಕಿಲ್ಲ ಎನ್ನುವುದು ಈ ಅಂಕಿ-ಸಂಖ್ಯೆಗಳಿಂದಲೇ ತಿಳಿದು ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net