ಸಕ್ಕರೆನಾಡು ಮಂಡ್ಯಕ್ಕೆ 85ರ ಹರೆಯ: ಆರಕ್ಕೇರದ ಮೂರಕ್ಕಿಳಿಯದ ಜಿಲ್ಲೆ

Mandya
Published on

ಮಂಡ್ಯ: ರಾಜ್ಯದಲ್ಲೇ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಜು.1ಕ್ಕೆ 85 ವರ್ಷ.

ಕಲೆ, ಸಹಕಾರ, ಸಾಂಸ್ಕೃತಿಕ, ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಡ್ಯ ಜಿಲ್ಲೆ ದೇಶದಲ್ಲಿಯೇ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಜಿಲ್ಲೆಯ ಜನರ ಮಾತು ಒರಟು ಎನಿಸಿದರೂ ಹೃದಯ ಬೆಣ್ಣೆಯಂತೆ ಎನ್ನುವ ಮಾತು ಸಾರ್ವಕಾಲಿಕ. ಒಮ್ಮೆ ಒಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದರೆ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಅದರಲ್ಲಿಯೂ ಚುನಾವಣಾ ಫಲಿತಾಂಶವನ್ನು ಕಂಡು ಮಂಡ್ಯ ಎಂದರೆ ಇಂಡಿಯಾ ಎನ್ನುವ ಹೆಗ್ಗಳಿಕೆಯೂ ಇದೆ.

ಮೈಸೂರು ಜಿಲ್ಲೆಗೆ ಸೇರಿದ್ದ ಮಂಡ್ಯ ಬೇರ್ಪಟ್ಟು 1939 ಜು.1ರಂದು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿತು. ಮೈಸೂರು ರಾಜಮನೆತನ ಅದರಲ್ಲಿಯೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಪ್ರಾರಂಭದಲ್ಲಿಯೇ ಅಭಿವೃದ್ಧಿಗೆ ಮುನ್ನುಡಿ ಬರೆಯಿತು. ಆದರೆ, ಮೈಸೂರು ರಾಜವಂಶಸ್ಥರ ನಂತರ ಯಾವುದೇ ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆ ಕಾಣಲಿಲ್ಲ.

ಇಷ್ಟಾದರೂ ಬೆಂಗಳೂರು ಮತ್ತು ಮೈಸೂರು ಮಹಾನಗರದ ನಡುವೆ ಇರುವ ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ದೊಡ್ಡಹಳ್ಳಿ ಎನ್ನುವ ಹಣೆಪಟ್ಟಿ ಮಾತ್ರ ಹೋಗಿಲ್ಲ. ಇದಕ್ಕೆ ಕಾರಣವೂ ಇದೆ. ಯಾರೇ ಬಂದರೂ ಅಭಿವೃದ್ಧಿ ಅಸಾಧ್ಯ ಎನ್ನುವ ಮಾತು ಜನರಿಗೆ ಎನ್ನಿಸಿದೆ. ಪರಿಣಾಮ ಆರಕ್ಕೇರದ ಮೂರಕ್ಕಿಳಿಯದ ಸಕ್ಕರೆನಾಡು ದಿನ ಕಳೆಯುತ್ತಿದೆ. ರಾಜಕೀಯ ದ್ವೇಷಕ್ಕೆ ಕೆಸರೆರಚಾಟ ಬಿಟ್ಟರೆ ಅಭಿವೃದ್ಧಿ ಕಡೆಗೆ ಒಲವು ತೋರಿಲ್ಲ. ಈ ನಡುವೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆದ ನಂತರ ಅಭಿವೃದ್ಧಿಯಲ್ಲಿ ಕೆಲ ವರ್ಷ ಹಿಂದಕ್ಕೆ ಹೋಗಿದಂತಾಗಿದೆ. ಇನ್ನಾದರೂ ರಾಜಕೀಯವನ್ನು ಬದಿಗೊತ್ತಿ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. ಜಿಲ್ಲೆಯ ಆರು ಶಾಸಕರು ರಾಜ್ಯ ಸರ್ಕಾರದ ಭಾಗವಾಗಿದ್ದಾರೆ. ಇನ್ನು ಕೇಂದ್ರ ಸಚಿವ ಸ್ಥಾನವೂ ಜಿಲ್ಲೆಗೆ ಒಲಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೇಲೆ ಜನರು ಹಲವು ನಿರೀಕ್ಷೆಗಳನ್ನು ಹೊತ್ತಿದ್ದಾರೆ. ನೀರಾವರಿ ಯೋಜನೆ, ಕೈಗಾರಿಕೆ, ರಸ್ತೆ, ಪ್ರವಾಸೋದ್ಯಮ ಸೇರಿದಂತೆ ಹಲವು ವಿಚಾರದಲ್ಲಿ ಅಭಿವೃದ್ಧಿ ಜತೆಗೆ ಬದಲಾವಣೆ ಬಯಸಿದ್ದಾರೆ.

ದೊಡ್ಡಹಳ್ಳಿ ಎನ್ನುವ ಅಪಖ್ಯಾತಿ ತೊಲಗಲಿ: ಅವಶ್ಯಕತೆಗಿಂತಲೂ ಹೆಚ್ಚಿರುವ ಸ್ವಾರ್ಥ ರಾಜಕಾರಣದಿಂದಾಗಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿರುವ ಮಂಡ್ಯ ಜಿಲ್ಲೆ, ಹೊರಗಿನ ಜನರು ನೋಡುವಂತೆ ಅಭಿವೃದ್ಧಿಯಾಗಿಲ್ಲ. ರಾಜಕೀಯ ವಿಚಾರಕ್ಕೆ ರಾಷ್ಟ್ರ ಮಟ್ಟದವರೆಗೂ ಖ್ಯಾತಿ ಪಡೆದಿರುವ ಜಿಲ್ಲೆಗೆ ಅದೇ ರಾಜಕೀಯವೇ ತೊಡಕಾಗಿ ಪರಿಣಮಿಸಿದೆ. ಯಾವುದೇ ಚುನಾವಣೆ ಎದುರಾದರೂ ಜಿಲ್ಲೆಯ ಜನರು ಬಳಸಿಕೊಳ್ಳುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ನಂತರ ಭರವಸೆಗಳ ಪಟ್ಟಿ ಕೊಟ್ಟು ಕಾಲ ಮುಂದೂಡುತ್ತಿವೆ. ಪರಿಣಾಮ ಬೆಂಗಳೂರು ಮತ್ತು ಮೈಸೂರು ಮಹಾನಗರಗಳ ನಡುವೆ ಇರುವ ದೊಡ್ಡ ಹಳ್ಳಿ ಎನ್ನುವ ಅಪಖ್ಯಾತಿ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಗೆ ವೇಗ ಸಿಗಬೇಕಿದೆ.

ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಗೆ ಶಾಶ್ವತ ಕಾಯಕಲ್ಪ ಸಿಗಲೇಬೇಕಿದೆ. ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕಿನಲ್ಲಿಯೂ ಕೈಗಾರಿಕೆಗಳು ಪ್ರಾರಂಭವಾಗಬೇಕಿದೆ. ಈ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಮೇಲೆ ಅಪಾರ ಭರವಸೆ ಇದೆ.

ಇನ್ನು ಕೃಷಿ ಸಚಿವರು ಜಿಲ್ಲೆಯವರೇ ಆಗಿರುವುದರಿಂದ ನಿರೀಕ್ಷೆ ಹೆಚ್ಚಾಗಿಯೇ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ರೈತರು ಕಬ್ಬು, ಭತ್ತ ಬೆಳೆದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಕೊನೆಗೆ ನಷ್ಟ ಅನುಭವಿಸಿ ಕೃಷಿಯಿಂದ ವಿಮುಖಗೊಂಡು ಉದ್ಯೋಗ ಅರಸಿ ನಗರದತ್ತ ವಲಸೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ ರೂಪಿಸಬೇಕಿದೆ. ಪ್ರಮುಖವಾಗಿ ಸಾಂಪ್ರದಾಯಿಕ ಕೃಷಿ ಜತೆಗೆ ಮಿಶ್ರ ಬೇಸಾಯ ಮತ್ತು ಸಾವಯವ ಕೃಷಿಯತ್ತ ರೈತರನ್ನು ಆಕರ್ಷಿಸಬೇಕಿದೆ. ಇದರೊಟ್ಟಿಗೆ ಕೃಷಿ ಮಹಾವಿದ್ಯಾಲಯದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವಂತಹ ಸಂಶೋಧನೆ ಆಗಬೇಕಿದೆ. ನೀರಾವರಿ ಯೋಜನೆ ಅನುಷ್ಠಾನ, ಕ್ರೀಡೆಗೆ ಪ್ರೋತ್ಸಾಹ, ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ, ಪ್ರವಾಸೋದ್ಯಮಕ್ಕೆ ಆಧುನಿಕ ಸ್ಪರ್ಶ ಸೇರಿದಂತೆ ಹಲವು ಯೋಜನೆ ಜಾರಿಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net