

ನವದೆಹಲಿ: ನನಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ವೆಂಟಿಲೇಟರ್ ಚಿಕಿತ್ಸೆ ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದ 80ವರ್ಷದ ವೃದ್ಧ, ಅರ್ಜಿ ವಿಚಾರಣೆಗೂ ಮೊದಲೇ ಮೃತಪಟ್ಟಿದ್ದಾರೆ.
ಮೋತಿರಾಮ್ ಗೋಯಲ್ ಎಂಬ ವೃದ್ಧ ಕರೊನಾ ಸೋಂಕಿಗೆ ತುತ್ತಾಗಿದ್ದರು. ವೆಂಟಿಲೇಟರ್ ವ್ಯವಸ್ಥೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ತಮಗೆ ಉಚಿತವಾಗಿ ಚಿಕಿತ್ಸೆ ನೀಡಲು ಆದೇಶ ನೀಡಿ ಎಂದು ಮನವಿ ಮಾಡಿ ದೆಹಲಿ ಹೈಕೋರ್ಟ್ಗೆ ಮನವಿ ಅರ್ಜಿ ಸಲ್ಲಿಸಿದ್ದರು.
ಇಂದು ಶುಕ್ರವಾರ ಅವರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳುವುದಿತ್ತು. ಆದರೆ ವೃದ್ಧ ಜೂ.3ರಂದು, ಅಂದರೆ ವಿಚಾರಣೆಗೆ ಎರಡು ದಿನಗಳ ಮೊದಲು ಮೃತಪಟ್ಟಿದ್ದಾರೆ. ಇನ್ನೂ ಒಂದು ವಿಚಿತ್ರವೆಂದರೆ ಅವರು ಕೋರ್ಟ್ಗೆ ಮನವಿ ಸಲ್ಲಿಸಿದ್ದರೂ ಕೂಡ ಜೂ.3ರಂದೇ. ಅರ್ಜಿ ಸಲ್ಲಿಸಿದ ದಿನವೇ ವೃದ್ಧ ಮೃತಪಟ್ಟಿದ್ದಾರೆ.
ಮೋತಿರಾಮ್ ಗೋಯಲ್ ಅವರು ಅತಿಯಾದ ಜ್ವರದಿಂದ ಜೈನ್ ಆಸ್ಪತ್ರೆಗೆ ಮೇ 25ರಂದು ದಾಖಲಾಗಿದ್ದರು. ಮೇ 30ರಂದು ಮೊದಲ ಬಾರಿಗೆ ಕೊವಿಡ್-19 ಪಾಸಿಟಿವ್ ಎಂದು ವರದಿ ಬಂದಿತ್ತು. ಜೂ.1ರಂದು ಟೆಸ್ಟ್ ಮಾಡಿದಾಗಲೂ ಕರೊನಾ ದೃಢಪಟ್ಟಿತ್ತು.
ಅಲ್ಲಿಂದ ಅವರ ಆರೋಗ್ಯ ಸ್ಥಿತಿ ತುಂಬ ಹದಗೆಡುತ್ತ ಹೋಗಿ, ಚಿಕಿತ್ಸೆಗೆ ವೆಂಟಿಲೇಟರ್ ಅಗತ್ಯಬಿತ್ತು. ಆದರೆ ಅವರು ಗೋಯಲ್ ದಾಖಲಾಗಿದ್ದ ಆಸ್ಪತ್ರೆ ವೈದ್ಯರು ತಮ್ಮ ಬಳಿ ಅಗತ್ಯ ಸಲಕರಣೆಗಳು ಇಲ್ಲ. ವೆಂಟಿಲೇಟರ್ ಇಲ್ಲ. ಹಾಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಿ ಎಂದು ವೃದ್ಧನ ಮಗನ ಮೇಲೆ ಒತ್ತಡ ಹಾಕಿದರು.
ಹಾಗೇ ವೃದ್ಧನ ಮಗ ಹಲವು ಪ್ರಮುಖ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೂ ಅವರೂ ಸಹ ಬೆಡ್ಗಳ ಕೊರತೆಯಂಥ ನೆಪ ಹೇಳಿ ಗೋಯಲ್ ಅವರನ್ನು ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಹಾಗೇ ವೆಂಟಿಲೇಟರ್ ಚಿಕಿತ್ಸೆಗೆ ಸಿಕ್ಕಾಪಟೆ ಹಣದ ಬೇಡಿಕೆಯನ್ನಿಟ್ಟಿವು.
ಈ ವೃದ್ಧ ತುಂಬ ಬಡವರಾಗಿದ್ದರು. ಚಿಕಿತ್ಸೆಗೆ ಭರಿಸುವ ಹಣ ಅವರಲ್ಲಿ ಇರಲಿಲ್ಲ. ಕೂಡಲೇ ಅವರು ಲಾಯರ್ ಆರ್. ಪಿ.ಎಸ್. ಭಟ್ಟಿ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಬಿಪಿಎಲ್ ಹೊಂದಿರುವ ತಮಗೆ ಯಾವುದಾದರೂ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. (ಏಜೆನ್ಸೀಸ್)