

ಕೋವಿಡ್ ಸಂಕಷ್ಟವನ್ನೇ ದುರುಳರು ಅಪರಾಧಿಕ ಕೃತ್ಯಗಳಿಗೆ ವೇದಿಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ನೆಪದಲ್ಲಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು 8 ವರ್ಷದ ಬಾಲಕನನ್ನು ಅಪಹರಿಸಿ 4 ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದರು.
ಆದರೆ, ಪೊಲೀಸರ ಕಾರ್ಯಾಚರಣೆ ಫಲವಾಗಿ ಮಹಿಳೆ ಸೇರಿ ಐವರು ಬಂಧಿಯಾಗಿದ್ದು, ಬಾಲಕನನ್ನು ರಕ್ಷಿಸಲಾಗಿದೆ.
ಈ ಘಟನೆ ನಡೆದಿದ್ದು, ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ. ಲ್ಯಾಬ್ ಟೆಕ್ನಿಷಿಯನ್ ಅಪಹರಣಕಾರರಿಗೆ 30 ಲಕ್ಷ ರೂ. ನೀಡಿದರು ಆತನನ್ನು ಜೀವಂತವಾಗಿ ಉಳಿಸಲಾಗದ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು.
ಶುಕ್ರವಾರ ಮಧ್ಯಾಹ್ನ ಗೊಂಡಾದ ಕರ್ನೈಲ್ಗಂಜ್ ಪ್ರದೇಶದ ದಿನಸಿ ಅಂಗಡಿ ವರ್ತಕ ಹರಿ ಗುಪ್ತಾ ಎಂಬುವರ ಮೊಮ್ಮಗನನ್ನು ಅಪಹರಿಸಿದ ತಂಡ 4 ಕೋಟಿ ರೂ. ನೀಡಬೇಕೆಂದು ಒತ್ತಾಯಿಸಿತ್ತು. ಪೊಲೀಸರಿಗೆ ತಿಳಿಸಿದರೆ ಏನೂ ಪ್ರಯೋಜನವಿಲ್ಲ ಏಕೆಂದರೆ, ಅವರೂ ಕೂಡ ನಮ್ಮೊಂದಿಗೆ ಶಾಮೀಲಾಗಿದ್ದಾರೆ ಎಂದೇ ಮಹಿಳೆಯೊಬ್ಬಳು ದೂರವಾಣಿ ಕರೆ ಮಾಡಿ ಎಚ್ಚರಿಸಿದ್ದಳು.
ಬಾಲಕನನ್ನು ಕಾರಿನಲ್ಲಿ ಪಾರಾ ಹಳ್ಳಿಯಿಂದ ಮತ್ತೊಂದೆಡೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಇಬ್ಬರ ಮೇಲೆ ಗುಂಡು ಹಾರಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಶೂಟೌಟ್ನಲ್ಲಿ ಉಮೇಶ್ ಯಾದವ್, ದೀಪು ಕಶ್ಯಪ್ ಎಂಬುವರ ಕಾಲಿಗೆ ಗುಂಡು ತಗುಲಿದೆ. ಸೂರಜ್ ಪಾಂಡೆ, ಆತನ ಪತ್ನಿ ಚಿತ್ರಾ, ಸಹೋದರ ರಾಜ್ ಪಾಂಡೆ ಬಂಧಿತರಾಗಿದ್ದಾರೆ.
ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಉತ್ತರಪ್ರದೇಶ ಸರ್ಕಾರದಿಂದ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.