

ಚೆನ್ನೈ: ಅಕ್ರಮವಾಗಿ ನೆಲೆಸಿದ್ದ 7ಬಾಂಗ್ಲಾ ಪ್ರಜೆಗಳನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಪೆರುಂದುರೈನ ಪನ್ನಿಕಂಪಾಳ್ಯಂನಲ್ಲಿ ಅವರು ಪತ್ತೆಯಾಗಿದ್ದಾರೆ.
ಎಸ್.ಮೋನಿರಾ(26), ಜೆ.ಮೇಗಮುತಾ(26), ಎಸ್.ಶೆಖಲಿ(33), ಬಿ.ಜಾಹಿದ್ (26), ಎಂ. ಅನಾರುಲ್ ಇಸ್ಲಾಂ(36), ಎಂ.ಮೊನಿರುಲ್ ಖಾಜಿ(40), ಮತ್ತು ಮಿಯಾ(45) ಬಂಧಿತರು.
ಪತ್ತೆಯಾದ 13 ಮಂದಿಯಲ್ಲಿ 6ಜನ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿಸುವ ಅಧಿಕೃತ ದಾಖಲೆಗಳನ್ನು ಹೊಂದಿದ್ದರು. ಉಳಿದವರ ಬಳಿ ಯಾವುದೇ ದಾಖಲಾತಿ ಇರಲಿಲ್ಲ. ಹೀಗಾಗಿ ದಾಖಲೆ ಒದಗಿಸಲು8 ಸ್ವಲ್ಪ ಸಮಯ ಕೇಳಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರು ಪೆರುಂದುರೈನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಪಾಸ್ಪೋರ್ಟ್ ಮತ್ತು ವೀಸಾಗಳಂತಹ ಅಗತ್ಯ ದಾಖಲೆಗಳು ಇರಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಈ ಜನರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೆಲವರಲ್ಲಿ ಭಾರತೀಯ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತವು ನೆರೆಯ ಬಾಂಗ್ಲಾದೇಶದಿಂದ ಅಕ್ರಮ ವಲಸೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದು ಅಂತಹ ಒಂದು ಸಾಮಾನ್ಯ ಘಟನೆಯಾಗಿದೆ. ಇತ್ತೀಚೆಗೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ 7 ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ.