ಮಹಾಮಾರಿ ಕರೊನಾಗೆ ದೇಶದಲ್ಲಿ ಎರಡನೇ ಬಲಿ: ದೆಹಲಿಯಲ್ಲಿ 69 ವರ್ಷದ ವೃದ್ಧೆ ಸಾವು

Corona
Published on

ನವದೆಹಲಿ: ಮಹಾಮಾರಿ ಕರೊನಾ ವೈರಸ್ ಸೋಂಕಿಗೆ ದೇಶದಲ್ಲಿ ಎರಡನೇ ಬಲಿಯಾಗಿದೆ.​ 69 ವರ್ಷದ ವೃದ್ಧೆಯೊಬ್ಬರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಕರ್ನಾಟಕದ ಕಲಬುರಗಿಯಲ್ಲಿ ದೇಶದ ಹಾಗೂ ರಾಜ್ಯದ ಮೊದಲ ಕರೊನಾ ಸಾವಿನ ಪ್ರಕರಣ ದಾಖಲಾಗಿತ್ತು.

ಪಶ್ಚಿಮ ದೆಹಲಿಯ ಜನಕ್​ಪುರಿ ನಿವಾಸಿಯಾಗಿದ್ದ ವೃದ್ಧೆ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಜಪಾನ್​, ಜಿನೇವಾ ಮತ್ತು ಇಟಲಿ ಮುಂತಾದ ಕಡೆ ವಿದೇಶ ಪ್ರವಾಸ ಮಾಡಿ ತವರಿಗೆ ಮರಳಿದ್ದ 46 ವರ್ಷದ ಪುತ್ರನಿಂದ ವೃದ್ಧೆಗೆ ಸೋಂಕು ತಗುಲಿತ್ತು ಎಂದು ದೆಹಲಿಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ವೃದ್ಧೆಯು ದೆಹಲಿಯಲ್ಲಿ ಸೋಂಕು ತಗುಲಿದ ಆರನೇ ಪ್ರಕರಣವಾಗಿದ್ದರು. ಅಲ್ಲದೆ, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ವೃದ್ಧೆಯ ಮಗನಿಗೂ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಗುರುವಾರವಷ್ಟೇ ಕರ್ನಾಟಕದ ಕಲಬುರಗಿಯಲ್ಲಿ ದೇಶದ ಮೊದಲ ಪ್ರಕರಣ ವರದಿಯಾಗಿತ್ತು. ಸದ್ಯ ಭಾರತದಲ್ಲಿ ಸೋಂಕು ತಗುಲಿದವರ ಸಂಖ್ಯೆ 85ಕ್ಕೇ ಏರಿದ್ದು, ಇಬ್ಬರು ಕರೊನಾಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net