

ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಶನಿವಾರ ಪ್ರಕಟಿಸಿದೆ.
ಪಾಲಿಕೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 66,213 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 11,763 ಮತದಾರರಿದ್ದಾರೆ. ಬೆಂಗಳೂರು ಪದವೀಧರರ ಕ್ಷೇತ್ರದ ಸೆಂಟ್ರಲ್ 9,680, ಉತ್ತರ 14,099, ದಕ್ಷಿಣ 12,620, ನಗರ 29,814 ಸೇರಿ ಒಟ್ಟು 66,213 ಮತದಾರರಿದ್ದು, ಇದರಲ್ಲಿ 30,233 ಪುರಷರು, 35,971 ಮಹಿಳಾ ಮತದಾರರಿದ್ದಾರೆ. ನ.23ರವರೆಗೆ 39,585 ಮತದಾರರಿದ್ದರು. ಒಂದು ತಿಂಗಳಲ್ಲಿ 26,355 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು ಶಿಕ್ಷಕ ಕ್ಷೇತ್ರದಲ್ಲಿ ಒಟ್ಟು 11,763 ಮತದಾರರಿದ್ದಾರೆ. ಸೆಂಟ್ರಲ್ 1,538,ಉತ್ತರ 2,155, ದಕ್ಷಿಣ 2,195 ಹಾಗೂ ನಗರ 5,875 ಸೇರಿ ಒಟ್ಟು 11,763 ಮತದಾರರಿದ್ದಾರೆ. ಇದರಲ್ಲಿ 3,626 ಪುರುಷರು ಹಾಗೂ 8,133 ಮಹಿಳಾ ಮತದಾರರಿದ್ದಾರೆ. ನ.23ಕ್ಕೆ ಈ ಕ್ಷೇತ್ರದಲ್ಲಿ 6,339 ಮತದಾರರಿದ್ದರು. ತಿಂಗಳಲ್ಲಿ 5,424 ಮಂದಿಯನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ವೇಳಾಪಟ್ಟಿ ಅನುಸಾರ ನ.23ರಿಂದ ಡಿ.9ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದರು.ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಹಾಗೂ ನಗರದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತಿತರರಿದ್ದರು.
ತಿದ್ದುಪಡಿ ಅವಧಿ ವಿಸ್ತರಣೆ: ಮುಂಬರುವ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ನಮೂನೆ ಸಲ್ಲಿಸಲು,ತಿದ್ದುಪಡಿ ಮಾಡುವ ಅವಧಿಯನ್ನು 2024ರ ಜ.12ರವರೆಗೆ ವಿಸ್ತರಿಸಲಾಗಿದೆ.ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಅಧಿಕಾರಿಗಳಿಗೆ ಸೂಚಿಸಿದರು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಕುರಿತು ರಾಜಕೀಯ ಪ್ರತಿನಿಧಿಗಳ ಜತೆ ಸಭೆ ನಡೆಸಿದ್ದ ಬಳಿಕ ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಅವಧಿಯನ್ನು ವಿಸ್ತರಿಸಲಾಗಿದೆ. ದತ್ತಾಂಶಗಳ ಕ್ರೂಡೀಕರಣ, ನವೀಕರಣ ಹಾಗೂ ಮುದ್ರಣ ಕಾರ್ಯವನ್ನು ಜ.17ಕ್ಕೆ ನಿಗದಿಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜ.22 ರಂದು ಪ್ರಕಟಿಸಲಾಗುವುದು ಎಂದರು.ಲೋಕಸಭಾ ಚುನಾವಣೆಗೆ ಅವಧಿ ವಿಸ್ತರಿಸಿರುವ ಬಗ್ಗೆ ಪಾಲಿಕೆಯ ಎಲ್ಲ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಬ್ಯಾನರ್ ಹಾಕಿ ನಾಗರಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗದಿರುವವರನ್ನು ಸೇರ್ಪಡೆ ಮಾಡುವ ಕಾರ್ಯ ಮಾಡಬೇಕು. ಅಲ್ಲದೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸೇರ್ಪಡೆಗೆ ಇನ್ನೂ ಅವಕಾಶ ಇದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.