

ಉತ್ತರ ಪ್ರದೇಶ: ವ್ಯಕ್ತಿಯೊಬ್ಬ ತನ್ನ ಬೈಕ್ನಲ್ಲಿ (Bike) 6 ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದವನನ್ನು ಸಂಚಾರಿ ಪೊಲೀಸರು ತಡೆಹಿಡಿದು, 7 ಸಾವಿರ ರೂ ದಂಡ ವಿಧಿಸಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ. ಈ ಘಟನೆಯ ಕುರಿತಾದ ಪೋಸ್ಟ್ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಬಳಕೆದಾರರು ರಸ್ತೆ ಸುರಕ್ಷತೆ ಕುರಿತಾದ ನಿರ್ಲಕ್ಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ಪೋಸ್ಟ್ನಲ್ಲಿ ಆ ವ್ಯಕ್ತಿ 4 ಮಕ್ಕಳನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡಿದ್ದಾನೆ. ಹಾಗೆಯೇ ಬೈಕಿನ ಪೆಟ್ರೋಲ್ ಟ್ಯಾಂಕ್ನ ಮೇಲೆ ಇಬ್ಬರು ಮಕ್ಕಳನ್ನು ಕೂರಿಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ಆತನನ್ನು ತಡೆದು ನಿಲ್ಲಿಸಿದ್ದು, ತಮ್ಮ ಎರಡೂ ಕೈಗಳನ್ನು ಮಡಚಿ, ಅವನ ಚಾಲನೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪೊಲೀಸರ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರನ್ನು ಕರೆದುಕೊಂಡು ಚಾಲನೆ ಮಾಡುವುದು ಜೀವಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಈ ರೀತಿಯ ಮೂಲಭೂತ ಸಂಚಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದಕ್ಕಾಗಿ ಆತನಿಗೆ ಅಧಿಕಾರಿಗಳು 7 ಸಾವಿರ ರೂ.ಗಳ ದಂಡವನ್ನು ವಿಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಹಾಪುರದ ಅಧಿಕಾರಿಗಳು ಇಂತಹ ಅಜಾಗರೂಕ ಕೃತ್ಯಗಳನ್ನು ಸಹಿಸುವುದಿಲ್ಲ. ಆದರಿಂದ ನಾಗರಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಹೆಲ್ಮೆಟ್ ಧರಿಸದೇ ದ್ವಿ ಚಕ್ರ ವಾಹನಗಳನ್ನು ಚಲಾಯಿಸುವುದು ಚಾಲಕ ಹಾಗೂ ಆತನ ಜೊತೆಯಲ್ಲಿರುವ ಸವಾರರಿಗೆ ಅಪಾಯ ಎಂದು ತಿಳಿಸಿದ್ದಾರೆ.
ಈ ವಿಡಿಯೋ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಅದರ ಅಗತ್ಯತೆ ಮತ್ತು ಸಾರ್ವಜನಿಕ ರಸ್ತೆಗಳನ್ನು ಆಟದ ಮೈದಾನಗಳಾಗಿ ಪರಿಗಣಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಸ್ಪಷ್ಟವಾಗಿ ವಿವರಿಸುತ್ತದೆ. (ಏಜೆನ್ಸೀಸ್)