ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ ಪ್ರಸಾದ ಪರಮ ಪಾವನವಾದುದು. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಅನ್ನದಾತ ಸುಬ್ಬಪ್ಪ ಎಂಬ ಪ್ರತೀತಿ ಪಡೆದ ದೇವಳದಲ್ಲಿ ಇತರ ಸೇವೆಗಳಂತೆ ಭೋಜನ ಪ್ರಸಾದ ಸ್ವೀಕಾರವು ಪವಿತ್ರವಾಗಿದೆ. ಇಲ್ಲಿ ವಾರ್ಷಿಕವಾಗಿ 55 ಲಕ್ಷಕ್ಕೂ ಮಿಕ್ಕಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ಇದೀಗ ಶ್ರೀ ದೇವಳದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ವಿಶೇಷ ಕಾಳಜಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರ ಚಿಂತನಾತ್ಮಕ ಯೋಜನೆ ಮೇರೆಗೆ ಪ್ರಸಾದ ಭೋಜನ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ವಿನೂತನ ಬದಲಾವಣೆ ತರಲಾಗಿದೆ. ಇದರಿಂದಾಗಿ ಭಕ್ತರಿಗೆ ವಿಶೇಷ ಭೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.
ವಿವಿಧ ಪಾಯಸಗಳು
ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ ಸದ್ಯ ನೂತನ ಯೋಜನೆ ಮೂಲಕ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಅಧಿಕಾರಿಗಳು ಮಾಡಿದ್ದಾರೆ. ಕಡ್ಲೆ ಬೇಳೆ, ಹೆಸರು ಬೇಳೆ, ಕಡ್ಳೆ ಬೇಳೆ ಸಾಬಕ್ಕಿ, ಗೋಧಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ, ಸಿರಿಧಾನ್ಯ ಸೇರಿದಂತೆ 10 ಬಗೆಯ ಪಾಯಸವನ್ನು ದಿನವಾಹಿ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ.
ಭಕ್ಷ್ಯ ಭೋಜನ
ಕುಕ್ಕೆ ದೇವಳದಲ್ಲಿ ಸಂಪ್ರದಾಯ ಪ್ರಕಾರ ಬಾಳೆ ಎಲೆಯಲ್ಲಿ ಭೋಜನ ಪ್ರಸಾದ ವಿತರಣೆಯಾಗುತ್ತದೆ. ಭಕ್ತರಿಗೆ ಅನಾದಿ ಕಾಲದಿಂದ ಪ್ರಸಾದದಲ್ಲಿ ವಿತರಿಸಲಾಗುತ್ತಿರುವ ಸಾಂಪ್ರದಾಯಿಕ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಣೆಯಾಗುತ್ತದೆ. ಜಾತ್ರೆ, ಹೊಸ್ತಾರೋಗಣೆ ದಿನಗಳಲ್ಲಿ ಭಕ್ಷ್ಯಗಳ ಸಂಖ್ಯೆ ಅಧಿಕವಿರುತ್ತದೆ. ಅಲ್ಲದೆ ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು , ಮಜ್ಜಿಗೆ ವಿತರಿಸಲಾಗುತ್ತದೆ. ಪ್ರಸಾದ ಭೋಜನ ಅತ್ಯಂತ ಸ್ವಾಧಿಷ್ಟ, ಪೌಷ್ಟಿಕಾಂಶಗಳಿಂದ ಕೂಡಿರಬೇಕೆಂದು ಅತ್ಯುತ್ತಮವಾದ 15 ಬಗೆ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಯೋಜನೆ ಮಾಡಿದ್ದಾರೆ.
ಶುಚಿತ್ವಕ್ಕೆ ಪ್ರಾಸಸ್ತ್ಯ
ಶುಚಿತ್ವ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಷಣ್ಮುಖ ಪ್ರಸಾದ ಭೋಜನ ಶಾಲೆಯಲ್ಲಿ 76ಕ್ಕೂ ಅಧಿಕ ಸಿಬ್ಬಂದಿ ದುಡಿಯುತ್ತಿದ್ದಾರೆ. ಶುಚಿತ್ವ, ಅಡುಗೆ ತಯಾರಿಗೆ, ವಿತರಣೆಗೆ ಪ್ರತ್ಯೇಕ ತಂಡವಿದೆ. ಭೋಜನ ಶಾಲೆ ಕೆಳ ಮತ್ತು ಮೇಲ್ಮಹಡಿಯಲ್ಲಿ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಬೆಳಗ್ಗೆ 5ಗಂಟೆಯಿಂದ ರಾತ್ರಿ 11ರ ತನಕ ನಿರಂತರವಾಗಿ ಇಲ್ಲಿ ಕೆಲಸ ಕಾರ್ಯಗಳು ನೆರವೇರುತ್ತದೆ. ಇಲ್ಲಿ ಕರ್ತವ್ಯ ವಿಭಾಗಿಸಿಕೊಂಡು ಕೆಲಸ ಕಾರ್ಯಗಳು ನಡೆಯುತ್ತದೆ. ಮಧ್ಯಾಹ್ನ 11.30 ರಿಂದ ಸಂಜೆ 3ಗಂಟೆ ತನಕ ಭೋಜನ ಪ್ರಸಾದ ವಿತರಣೆಯಾಗುತ್ತದೆ. ವಾರ್ಷಿಕವಾಗಿ 55 ಲಕ್ಷಕ್ಕೂ ಅಧಿಕ ಭಕ್ತರು ಭೋಜನ ಪ್ರಸಾದ ಸ್ವೀಕರಿಸಬಹುದು ಎಂದು ಅಂದಾಜಿಸಲಾಗಿದೆ.
ಶಿಕ್ಷಣಕ್ಕಾಗಿ ಅನ್ನದಾನ
ಶ್ರೀ ದೇವಳ ಭಕ್ತರಿಗೆ ಸೂಕ್ತವಾದ ಅನುಕೂಲತೆ ಒದಗಿಸುವುದರ ಜತೆಗೆ ತನ್ನ ಆಡಳಿತದಲ್ಲಿ ಎರಡು ಶಿಕ್ಷಣ ಸಂಸ್ಥೆಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಿನ ನಿತ್ಯ ದೇವಳದಿಂದ ಪ್ರಸಾದ ಭೋಜನ ವಿತರಣೆಯಾಗುತ್ತಿದೆ. ಅದೇ ರೀತಿ ಕ್ಷೇತ್ರದಲ್ಲಿನ ಇತರ ಶಾಲೆಗಳಿಗೆ ಕೂಡಾ ದೇವಳದಿಂದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ವ್ಯಾಸಂಗ ಮಾಡುವ 3,300 ಮಂದಿಗೆ ಭೋಜನ ಪ್ರಸಾದ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನ ಪ್ರಗತಿಗೆ ದೇವಳ ತನ್ನದೇ ಆದ ಕೊಡುಗೆ ನೀಡಿದೆ.
ದೇವಳದಲ್ಲಿ ಭೋಜನ ಕೂಡಾ ಒಂದು ಅಮೂಲ್ಯವಾದ ಪ್ರಸಾದ. ಹಿಂದಿನಿಂದಲೂ ದೇವರ ಅನ್ನಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಪಾಕಶಾಲೆ ನಿರ್ಮಾಣವಾಗಿದೆ. ಮುಂದೆ ಭಕ್ತರಿಗೆ ದೇವರ ಭೋಜನ ಪ್ರಸಾದ ಸ್ವೀಕರಿಸಲು ಹೆಚ್ಚಿನ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಭಕ್ತರಿಗೆ ಭೋಜನ ಪ್ರಸಾದ ಸ್ವೀಕಾರ ಸುಲಲಿತಗೊಳಿಸಲು ಬೇಕಾದ ಉತ್ತಮ ಯೋಜನೆ ನಡೆಸಲಾಗುವುದು. ಇದರೊಂದಿಗೆ ಭಕ್ತರಿಗೆ ಸೂಕ್ತವಾದ ಅನುಕೂಲತೆ ಒದಗಿಸುವ ಮೂಲಕ ದೇವರ ಸೇವೆ ಮಾಡಲು ಪ್ರಯತ್ನಿಸುತ್ತೇವೆ.
ಜುಬಿನ್ ಮಹಪಾತ್ರ ಆಡಳಿತಾಧಿಕಾರಿ, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು
ಭಕ್ತರಿಗೆ ಪೌಷ್ಟಿಕಾಂಶ ಭರಿತವಾದ ವಿಶೇಷ ಭೋಜನ ಪ್ರಸಾದ ವಿತರಿಸುವ ದೃಷ್ಠಿಯಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಭಕ್ತರು ಸ್ವಾದಿಷ್ಠವಾದ ಪ್ರಸಾದ ಸ್ವೀಕರಿಸಲು ಅನುಕೂಲತೆಯಾಗಿದೆ. ವಿವಿಧ ಬಗೆ ಪಾಯಸ, ತರಕಾರಿಗಳ ಸಾಂಬಾರನ್ನು ತಯಾರಿಸಲಾಗುತ್ತಿದೆ. ಭೋಜನ ಪ್ರಸಾದ ವಿತರಣೆ, ತಯಾರಿಕೆ ವ್ಯವಸ್ಥೆಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.
ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ
ಪ್ರತಿದಿನ ಕಾಲೇಜಿಗೆ ಊಟ ಬರುತ್ತಿರುವುದರಿಂದ ವಿದ್ಯಾರ್ಥಿಗಳ, ಕಾಲೇಜಿನ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಳಿಂದ ಬರುವಂತಹ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ಆಹಾರ ಸೇವಿಸದೆ ಬರುತ್ತಾರೆ. ಆದುದರಿಂದ ಮಧ್ಯಾಹ್ನ ಉತ್ತಮವಾದ ಭೋಜನ ಸಿಗುವ ಕಾರಣ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತಿದೆ. ಅಷ್ಟೇ ಅಲ್ಲದೆ ಆರೋಗ್ಯಕರ ಆಹಾರ ದೊರಕುವುದರಿಂದ ವಿದ್ಯಾರ್ಥಿಗಳ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ.
ಸೋಮಶೇಖರ ನಾಯಕ್, ಎಸ್‌ಎಸ್‌ಪಿಯು ಕಾಲೇಜು ಪ್ರಾಚಾರ್ಯರು