ಡೆಂಘೆ ರೋಗಿಗಳಿಗೆ ಉಚಿತ ರಕ್ತ ನೀಡಲು 500 ಮಂದಿಯಿಂದ ರಕ್ತದಾನ

f96c4b63-de23-4258-8a93-9dc34e100001
Published on

ಬೆಂಗಳೂರು: ನಗರದಲ್ಲಿ ಡೆಂಘೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಉಚಿತವಾಗಿ ರಕ್ತ ನೀಡುವ ನಿಟ್ಟಿನಲ್ಲಿ ಲಯನ್ಸ್​ ಕ್ಲಬ್​ ಹಾಗೂ ಪೆಮ್​ ಕೋ ಸಂಸ್ಥೆ ಯ ಸಹಯೋಗದಲ್ಲಿ ಶಿಲ್ಪಾ ಫೌಂಡೇಷನ್​ ವತಿಯಿಂದ ಗುರುವಾರ ನಗರದಲ್ಲಿ ಬೃಹತ್​ ರಕ್ತದಾನ ಶಿಬಿರ ಆಯೋಜಿಸಿತ್ತು. ಅಂದಾಜು 500ಕ್ಕೂ ಅಧಿಕ ಐಟಿ ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಡೆಂಘೆ ಜ್ವರದಿಂದ ಬಳಲುತ್ತಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ.

ಎಲ್​ಕೆಕ್ಯೂ ಸಂಸ್ಥೆಯ ನಿರ್ದೇಶಕ ಕಿಶೋರ್​ ಮಾತನಾಡಿ, ಹಲವು ವರ್ಷಗಳಿಂದ ಶಿಲ್ಪಾ ಫೌಂಡೇಷನ್​ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ. ಹಲವು ಸಂಸ್ಥೆಗಳನ್ನು ಒಟ್ಟಿಗೆ ಸೇರಿಸಿ ಇಂತಹ ರಕ್ತದಾನ ಶಿಬಿರ ಸೇರಿ ಸಮಾಜಕ್ಕೆ ಅನಿವಾರ್ಯತೆವುಳ್ಳ ಕಾರ್ಯಕ್ರಮ ರೂಪಿಸುವ ಮೂಲಕ ಸೇವೆ ಸಲ್ಲಿಸುತ್ತಿರುವುದು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಶಿಲ್ಪಾ ಫೌಂಡೇಷನ್​ ಸಂಸ್ಥಾಪಕ ಅಚ್ಚುತ್​ಗೌಡ ಮಾತನಾಡಿ, ನಮ್ಮ ಸಂಸ್ಥೆಯು 10 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆಯ ಮಹತ್ತರ ಜವಾಬ್ದಾರಿ ಹೊತ್ತುಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದೆ. 10ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಬೃಹತ್​ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ಕೆ 50ಕ್ಕೂ ಹೆಚ್ಚು ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿದ್ದೇವೆ. ನಗರದಲ್ಲಿ ಮೂರು ಸುಸಜ್ಜಿತ ಸ್ಮಾರ್ಟ್​ ಬಸ್​ ನಿಲ್ದಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಫಿಡಲಿಟಸ್​ ಎಚ್​ಆರ್​ ಲ್ಯಾಬ್​ ನಿರ್ದೇಶಕಿ ಸುಹಾಸಿನಿ ದೇಶಪಾಂಡೆ, ಪರಿಸರ ತಜ್ಞ ಪ್ರಕೃತಿ ಪ್ರಸನ್ನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net