

ಮಂಗಳೂರು: ಶಾಲಾ ಶಿಕ್ಷಕನೇ ಅಪಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 5 ವರ್ಷ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ ಎಫ್ಟಿಎಸ್ಸಿ-1) ತೀರ್ಪು ನೀಡಿದೆ.
ಮೂಲತಃ ಹತ್ಯಡ್ಕ ಅರಸಿನಮಕ್ಕಿ ಪಡ್ಡಾಯಿಬೆಟ್ಟು, ಪ್ರಸ್ತುತ ಕಲ್ಲಮುಂಡ್ಕೂರು ನಿವಾಸಿ ಗುರುವ ಮೊಗೇರ ಯಾನೆ ಗುರುವ ಎಂ.ಪಿ. (49) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ವಿವರ: ಶಿಕ್ಷಕನಾದ ಗುರುವ ಮೊಗೇರ ವಿದ್ಯಾರ್ಥಿನಿಯರಿಗೆ ರಜೆ ಬೇಕಿದ್ದರೆ ಅಥವಾ ಪಠ್ಯಕ್ಕೆ ಸಂಬಂಧಪಟ್ಟಂತೆ ಏನಾದರೂ ಸಂದೇಹವಿದ್ದರೆ ಶಾಲೆಯಲ್ಲಿರುವ ಪ್ರತ್ಯೇಕ ಕೊಠಡಿಗೆ ಬರಲು ಹೇಳುತ್ತಿದ್ದ. ಕೆಲವೊಮ್ಮೆ ಒಬ್ಬೊಬ್ಬ ವಿದ್ಯಾರ್ಥಿನಿಯರನ್ನೇ ರೂಮಿಗೆ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಮುಖ್ಯ ಶಿಕ್ಷಕರಲ್ಲಿ ದೂರು ನೀಡಿದ್ದರು.
ಮಹಿಳಾ ಠಾಣೆಯಲ್ಲಿ ಕೇಸು ದಾಖಲು: ವಿದ್ಯಾರ್ಥಿನಿಯೊಬ್ಬಳಿಗೆ 2 ಬಾರಿ ಲೈಂಗಿಕ ಕಿರುಕುಳ ನೀಡಿದ ದೂರಿನ ಹಿನ್ನಲೆಯಲ್ಲಿ ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ ಇತರ 4ಮಂದಿ ವಿದ್ಯಾರ್ಥಿನಿಯರು ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ ಎಫ್ಟಿಎಸ್ಸಿ-1) ನ್ಯಾಯಾಧೀಶರಾದ ಡಿ. ವಿನಯ್ ಸಮಗ್ರ ವಿಚಾರಣೆ ನಡೆಸಿ, ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗೆ ಐಪಿಸಿ 354 (ಲೈಂಗಿಕ ಕಿರುಕುಳ)ರಡಿ 1ವರ್ಷ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಸಜೆ, ಕಲಂ 10 (ಪೋಕ್ಸೋ)ರಡಿ 5ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ವರ್ಷ ಸಜೆ, ಕಲಂ 12 (ಪೋಕ್ಸೋ)ರಡಿ 3ವರ್ಷ ಸಾದಾ ಸಜೆ ಮತ್ತು 3ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ 1ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಅಪರಾಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬಹುದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನಗರ ಮಹಿಳಾ ಠಾಣೆಯ ಉಪನಿರೀಕ್ಷಕ ಶಿವರುದ್ರಮ್ಮ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸಂತ್ರಸ್ತೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ವಾದಿಸಿದ್ದರು.
ಆರೋಪಿಗೆ ಮದುವೆಯಾಗಿದ್ದು ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.