ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 5.75 ಲಕ್ಷ ರೂ. ವೆಚ್ಚದಲ್ಲಿ ತಳಲೆ ಗ್ರಾಮದ ಕೆರೆ ಜೀರ್ಣೋದ್ಧಾರ

11 RPT 2
ತಳಲೆ ಗ್ರಾಮದ ತಲಕಟ್ಟಿನಕೆರೆ ಅಭಿವೃದ್ಧಿಗೊಳಿಸುತ್ತಿರುವುದು.
Published on

ರಿಪ್ಪನ್‌ಪೇಟೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಊರು ನಮ್ಮ ಕೆರೆ ಅಭಿವೃದ್ಧಿ ಅಡಿಯಲ್ಲಿ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದ ತಲಕಟ್ಟಿನ ಕೆರೆ ಪುನುರುಜ್ಜೀವನಗೊಳಿಸಲಾಗಿದೆ.

1952ನೇ ಸಾಲಿನಲ್ಲಿ ಅಭಿವೃದ್ಧಿ ಕಂಡಿದ್ದ 3.30 ಎಕರೆ ವಿಸ್ತೀರ್ಣದ ತಲಕಟ್ಟಿನಕೆರೆ ಹೂಳು ತುಂಬಿಕೊಂಡಿತ್ತು. ಮಳೆಗಾಲದಲ್ಲಿ ಕೆೆಲತಿಂಗಳು ಮಾತ್ರ ನೀರು ಶೇಖರಣೆಗೊಂಡು ಬತ್ತಿ ಹೋಗುವ ದುಸ್ಥಿತಿ ತಲುಪಿತ್ತು. ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿಯೇ ಇರುವ ಒಣ ಕೆರೆಯಲ್ಲಿ ನೀರು ಸಂಗ್ರಹ ಮಾಡುವ ಆಲೋಚನೆಯಿಂದ ಗ್ರಾಮಸ್ಥರು ಮತ್ತು ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳು ಸಮಾಲೋಚನೆ ಮತ್ತು ಸಹಕಾರದಿಂದ ಕೆರೆ ಸಮಗ್ರ ಅಭಿವೃದ್ಧಿಗೊಂಡಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3.75 ಲಕ್ಷ ರೂ. ಅನುದಾನ ಹಾಗೂ ಗ್ರಾಮಸ್ಥರ 2 ಲಕ್ಷ ರೂ. ಸೇರಿದಂತೆ ಒಟ್ಟು 5.75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಕೆರೆಯಲ್ಲಿ ತುಂಬಿದ್ದ 9,800 ಘನ ಮೀಟರ್‌ನಷ್ಟು ಹೂಳು ಹೊರ ತೆಗೆದು ಆಳಗೊಳಿಸಲಾಗಿದೆ. ಇದರಿಂದ ಒಂದು ಕೋಟಿ ಲೀಟರ್ ನೀರು ಸಂಗ್ರಹವಾಗುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕೆರೆಯ ಸುತ್ತ ಐದುನೂರು ಮೀಟರ್ ಉದ್ದದ ಏರಿ ನಿರ್ಮಾಣ ಮಾಡಲಾಗಿದೆ. ಕೆರೆಯ ಮಧ್ಯದಲ್ಲಿ ಸದಾಕಾಲ ನೀರು ಉಳಿಯುವಂತೆ ಹಾಗೂ ಜಾನುವಾರುಗಳ ಆಸರೆ ನೀಗಿಸಿಕೊಳ್ಳಲು ತೊಟ್ಟಿ ನಿರ್ಮಾಣ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಕೆರೆಗೆ ಹೊಸ ಕಾಯಕಲ್ಪ ನೀಡಿದ್ದು, ಸುಂದರವಾಗಿ ರೂಪುಗೊಂಡಿದೆ.
ಹೂಳು ತೆಗೆದಿರುವ ಕಾರಣ ಈ ಬಾರಿ ಹೆಚ್ಚು ನೀರು ಸಂಗ್ರಹವಾಗಿ ಸುಮಾರು 65 ಎಕರೆ ಕೆರೆ ಅಚ್ಚುಕಟ್ಟುದಾರರಿಗೆ ಅನುಕೂಲವಾಗಲಿದೆ. ಅಂತರ್ಜಲ ವೃದ್ಧಿಗೊಂಡು ಅಕ್ಕಪಕ್ಕದ ಗ್ರಾಮಗಳಲ್ಲಿರುವ ಕೊಳವೆಬಾವಿಗಳು ಪುನುರುಜ್ಜೀವನಗೊಳ್ಳಲಿವೆ. ಜನ-ಜಾನುವಾರುಗಳಿಗೆ ಸದಾಕಾಲ ನೀರು ಲಭಿಸಿ ಸುತ್ತಮುತ್ತಲಿನ ಪರಿಸರ ಸದಾ ಹಚ್ಚಹಸಿರಾಗಿರುವಂತೆ ಕಂಗೊಳಿಸಲು ಪೂರಕವಾಗಲಿ ಎಂಬುದು ಯೋಜನೆಯ ಉದ್ದೇಶವಾಗಿದೆ ಎಂದು ಯೋಜನಾ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ 49 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ತಳಲೆ ತಲಕಟ್ಟಿನಕೆರೆ 50ನೇಯದ್ದಾಗಿದೆ. ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆಯಾಗಿದೆ. ಭವಿಷ್ಯದಲ್ಲಿ ನೀರಿನ ಬರವನ್ನು ನೀಗಿಸುವ ಉತ್ತಮ ಯೋಜನೆಯಾಗಿದೆ.ಗಣಪತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಭಿಯಂತರ

ಶಿಥಿಲಾವಸ್ಥೆ ತಲುಪಿದ್ದ ಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ವಿಶೇಷ ಆಸಕ್ತಿಯಿಂದ ಅಭಿವೃದ್ಧಿಗೊಳಿಸಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹಣೆಗೊಂಡು ಜನ-ಜಾನುವಾರುಗಳಿಗೆ ಬಹಳ ಉಪಯುಕ್ತವಾಗಲಿದೆ.ಲಿಂಗಪ್ಪ ಕಗ್ಗಲಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net