

ಉಡುಪಿ: ಹೊಸವರ್ಷದಲ್ಲಿ ಖಗೋಳದಲ್ಲಿ ಅನೇಕ ಕೌತುಕಗಳು ಕಂಗೊಳಿಸಲಿವೆ. ಜನವರಿಯಲ್ಲಿ ಮಂಗಳ, ಸೆಪ್ಟೆಂಬರ್ನಲ್ಲಿ ಶನಿ, ಡಿಸೆಂಬರ್ನಲ್ಲಿ ಗುರುಗ್ರಹ ಭವ್ಯವಾಗಿ ಕಾಣಲಿದೆ. ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬುಧ, ಶುಕ್ರ, ಶನಿ, ಗುರು ಹಾಗೂ ಮಂಗಳ ಗ್ರಹಗಳೂ ಸುಂದರವಾಗಿ ಗೋಚರವಾಗಲಿವೆ.
ಸೂರ್ಯನ ಜ್ವಾಲೆಗಳ ನರ್ತನ: ಹನ್ನೊಂದು ವರ್ಷದಲ್ಲೊಮ್ಮೆ ನಡೆಯುವ ಅತಿ ಹೆಚ್ಚು ಸೌರಜ್ವಾಲೆಗಳು ಈ ವರ್ಷದ ಆರಂಭದ ಕೆಲ ತಿಂಗಳಲ್ಲಿ ಅತಿಯಾಗಲಿವೆ. ಕುದಿಯುವ ಸೂರ್ಯ ದಶದಿಶೆಗೆ ವಿಶೇಷಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಲಿದ್ದಾನೆ. ಅತಿ ಹೆಚ್ಚು ಸೌರಕಲೆಗಳುಂಟಾಗಲಿವೆ ಎಂದು ಖಗೋಳ ಶಾಸ್ತ್ರಜ್ಞ ಎ.ಪಿ.ಭಟ್ ತಿಳಿಸಿದ್ದಾರೆ.
4 ಗ್ರಹಣಗಳು: ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುವುವಾದರೂ ಭಾರತಕ್ಕೆ ಒಂದೇ ಗ್ರಹಣ ಗೋಚರವಾಗಲಿದೆ. ಮಾ.13 ಅಥವಾ 14 ಚಂದ್ರಗ್ರಹಣ, 29 ಪಾರ್ಶ್ವ ಸೂರ್ಯಗ್ರಹಣ, ಸೆ.7 ಅಥವಾ 8ರಂದು ಚಂದ್ರಗ್ರಹಣ ಹಾಗೂ ಸೆ.21ರಂದು ಪಾರ್ಶ್ವ ಸೂರ್ಯ ಗ್ರಹಣವಿದೆ. ಇವುಗಳಲ್ಲಿ ಭಾರತಕ್ಕೆ ಸೆ.7ರ ಚಂದ್ರಗ್ರಹಣ ಒಂದೇ ಕಾಣಸಿಗುತ್ತದೆ.
3 ಸೂಪರ್ ಮೂನ್ಗಳು: ಈ ವರ್ಷ ಮೂರು ಸೂಪರ್ ಮೂನ್ಗಳನ್ನು ನೋಡಬಹುದು. ಅ.7, ನ.5, ಡಿ.4ರಂದು ಸೂಪರ್ ಮೂನ್ಗಳು, ಮಾ.14, ಏ.13, ಮೇ 12ರಂದು ಮೈಕ್ರೋ ಮೂನ್ ಗೋಚರಿಸಲಿವೆ.
ಶನಿಗ್ರಹದ ಬಳೆ ಮಾಯ: ಈ ವರ್ಷದ ಮಾರ್ಚ್ನಿಂದ ನವೆಂಬರ್ವರೆಗೆ ಶನಿ ಗ್ರಹದ ಬಳೆಗಳು ಕಾಣುವುದಿಲ್ಲ. ಶನಿಗ್ರಹದ ಬಳೆಗಳ ಸಮತಲ ಹಾಗೂ ಭೂಮಿಯ ಸಮತಲ ಒಂದೇ ಆಗುವುದು ಇದಕ್ಕೆ ಪ್ರಮುಖ ಕಾರಣ.