

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ಚಿತ್ರ-ವಿಚಿತ್ರ ಘಟನೆಗಳಾಗುತ್ತಿವೆ. ಒಂದೇ ದಿನದಲ್ಲಿ, ಆಲಿಯಾ ಭಟ್ ಅವರ ಇನ್ಸ್ಟಾಗ್ರಾಂ ಅಕೌಂಟ್ನಿಂದ ನಾಲ್ಕೂವರೆ ಲಕ್ಷ ಹಿಂಬಾಲಕರು ಅನ್ಫಾಲೋ ಮಾಡಿದ್ದಾರೆ. ಈ ಮೊದಲು 48 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದ ಆಲಿಯಾ ಖಾತೆಯಲ್ಲೀಗ 47.6 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ. ಆಲಿಯಾ ಭಟ್ ಅಷ್ಟೇ ಅಲ್ಲ, ಸಲ್ಮಾನ್ ಖಾನ್, ಕರಣ್ ಜೋಹರ್, ಸೋನಮ್ ಕಪೂರ್ ಖಾತೆಗಳಿಂದಲೂ ಜನ ಕಾಲ್ಕಿತ್ತಿದ್ದಾರೆ.
ಜನ ಸ್ಟಾರ್ಗಳನ್ನು ಅನ್ಫಾಲೋ ಮಾಡುವುದಕ್ಕೂ, ಸುಶಾಂತ್ ಸಾವಿಗೂ ಏನು ಕಾರಣ ಎಂಬ ಪ್ರಶ್ನೆ ಬರಬಹುದು. ಸುಶಾಂತ್ ಸಾವಿನ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವು ಸ್ಟಾರ್ ನಿರ್ವಪಕರು ಮತ್ತು ನಟರು, ಸ್ಟಾರ್ ಮಕ್ಕಳನ್ನು ಮಾತ್ರ ಬೆಳೆಸುತ್ತಾರೆ, ಸಾಮಾನ್ಯರನ್ನು ದೂರ ಇಡುತ್ತಾರೆ ಎಂಬ ಕೂಗು ಕೇಳಿ ಬರುತ್ತಿದೆ. ಅದರಲ್ಲೂ ಕರಣ್ ಜೋಹರ್, ಸಲ್ಮಾನ್ ಖಾನ್ ಮುಂತಾದವರು ಬಾಲಿವುಡ್ನಲ್ಲಿ ಸ್ವಜನಪಕ್ಷಪಾತವನ್ನು ಹೆಚ್ಚಾಗಿ ಪೋಷಿಸುತ್ತಾರೆ ಮತ್ತು ಅವರು ಸಾಮಾನ್ಯರ ಮಕ್ಕಳನ್ನು ಬೆಳೆಯುವುದಕ್ಕೆ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಇನ್ನು ಆಲಿಯಾ ಭಟ್, ಸೋನಮ್ ಕಪೂರ್ ಮುಂತಾದ ಸ್ಟಾರ್ ಮಕ್ಕಳಿಂದಾಗಿ ಸಾಮಾನ್ಯರು ಬೆಳೆಯುತ್ತಿಲ್ಲ ಎಂಬ ಬೇಸರ ಹಲವರಲ್ಲಿದೆ.
ಇದೆಲ್ಲಾ ಈಗ ಸಿಟ್ಟಾಗಿ ಪರಿವರ್ತಿತವಾಗುತ್ತಿದೆ. ಅದೇ ಸಿಟ್ಟಿನಲ್ಲಿ, ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಅಭಿಮಾನಿಗಳಾಗಿ ಗುರುತಿಸಿಕೊಂಡವರು, ಈಗ ಕ್ರಮೇಣ ಅನ್ಫಾಲೋ ಮಾಡುತ್ತಿದ್ದಾರೆ. ಈ ಪೈಕಿ, ಅತೀ ಹೆಚ್ಚು ಪೆಟ್ಟು ಬಿದ್ದಿರುವುದು ಆಲಿಯಾ ಭಟ್ಗೆ. ಇನ್ನು ಕರಣ್ ಜೋಹರ್ 2ಲಕ್ಷ ಕಳೆದುಕೊಂಡರೆ, ಸಲ್ಮಾನ್ ಖಾನ್ 50 ಸಾವಿರದಷ್ಟು ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಸುಶಾಂತ್ ಪರವಾಗಿ ಮಾತನಾಡಿದ ಕಂಗನಾ ಮತ್ತು ಸುಶಾಂತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕೃತಿ ಸನಾನ್, ಶ್ರದ್ಧಾ ಕಪೂರ್ ಅವರ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.