ಕೊರಟಗೆರೆ ತಾಲೂಕಿಗೆ 214 ಕೋಟಿ ವೆಚ್ಚದಲ್ಲಿ 3,811 ಕಾಮಗಾರಿಗಳು!

Published on

ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಮಾಹಿತಿ | ಆಸ್ಪತ್ರೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ 

ಕೊರಟಗೆರೆ: ಜಿಲ್ಲೆಯಲ್ಲಿ 2024&-25ನೇ ಸಾಲಿನಲ್ಲಿ 214 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 3,811 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಕೆಲಸ ಪ್ರಗತಿಯಲ್ಲಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸದರಿ ಅನುದಾನದಲ್ಲಿ ಶಾಲೆ, ಅಂಗನವಾಡಿ, ಆಸ್ಪತ್ರೆಗಳ ದುರಸ್ತಿ ಸೇರಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 27 ಕೋಟಿ ರೂ. ಸಿಎಸ್​ಆರ್​ ಅನುದಾನವನ್ನೂ ಶಾಲಾ ಕೊಠಡಿಗಳ ದುರಸ್ತಿ ಮತ್ತು ಆರೋಗ್ಯ ಸೌಕರ್ಯಕ್ಕೆ ವಿನಿಯೋಗಿಸಲಾಗುವುದು ಎಂದರು.

ಹೂಲೀಕುಂಟೆಯಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿರುವ ಜೇನು ಕೃಷಿ ಕಚೇರಿಯನ್ನು ಕೂಡಲೇ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸುವಂತೆ ತೋಟಗಾರಿಕೆ ಇಲಾಖಾಧಿಕಾರಿಗೆ ಪರಮೇಶ್ವರ ಸೂಚಿಸಿದರು. ಹೊಳವನಹಳ್ಳಿಯಲ್ಲಿನ ಜನತಾ ಕಾಲನಿ ಬಳಿಯ ವಿದ್ಯಾರ್ಥಿ ನಿಲಯಕ್ಕೆ ಅಗತ್ಯ ಸೌಕರ್ಯ ಕಲ್ಪಿಸಿ, ಸಮಾಜ ಕಲ್ಯಾಣ ಇಲಾಖೆಯು ತನ್ನ ಸುಪರ್ದಿಗೆ ಪಡೆದುಕೊಂಡು, ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಬೇಕು ಎಂದರು. ಕೇಂದ್ರದ ಜಲಜೀವನ್​ ಮಿಷನ್​ ಉತ್ತಮ ಯೋಜನೆಯಾದರೂ ಸಹ ಕಳಪೆ ಕಾಮಗಾರಿ ಮತ್ತು ನೀರಿನ ಕೊರತೆ ಇರುವ ಕಡೆಯೂ ಕಾಮಗಾರಿ ನಡೆದಿರುವುದು ಈ ಯೋಜನೆಗೆ ಹಿನ್ನೆಡೆಯಾಗಿದೆ. ನಮ್ಮ ಕ್ಷೇತ್ರದಲ್ಲಿ ಈ ರೀತಿಯ ಲೋಪಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಎಇಇಗೆ ಸಚಿವರು ಎಚ್ಚರಿಸಿದರು. ಲೋಕೋಪಯೋಗಿ ಇಲಾಖೆಯ ಕಾಮಗಾರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು.

48 ನೂತನ ಗ್ರಾಮಗಳು: ಕೊರಟಗೆರೆ ತಾಲೂಕಿನಲ್ಲಿ 48 ಗ್ರಾಮಗಳನ್ನು ನೂತನವಾಗಿ ಮಾಡಲಾಗಿದ್ದು, ಇವುಗಳಲ್ಲಿ ಲಂಬಾಣಿ ತಾಂಡಾ ಮತ್ತು ಗೊಲ್ಲರಹಟ್ಟಿಗಳೂ ಸೇರಿವೆ. ಈಗಾಗಲೇ 800 ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ತಾಲೂಕಿನಲ್ಲಿ 4,422 ನರೇಗಾ ಕಾಮಗಾರಿಗಳು 39 ಕೋಟಿ ರೂ.ಗಳಲ್ಲಿ ಪ್ರಗತಿಯಲ್ಲಿವೆ. 20 ಕೋಟಿ ರೂ. ಅನುದಾನವನ್ನು ಈಗಾಗಲೇ ವ್ಯಯಿಸಲಾಗಿದೆ. ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆ ಮೂಲು ಕೆರೆ ತುಂಬಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಬೈರಗೊಂಡ್ಲು ಬಳಿಯ ಬಫರ್​ ಡ್ಯಾಂ ಮರು ಪರಿಶೀಲನೆಗೆ ಜಲಸಂಪನ್ಮೂಲ ಸಚಿವವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಆಗಮಿಸಿಲಿದ್ದಾರೆ ಎಂದು ಪರಮೇಶ್ವರ ಮಾಹಿತಿ ನೀಡಿದರು.

ಪೌರಕಾರ್ಮಿಕರಿಗೆ ನಿವೇಶನ ಹಸ್ತಾಂತರಿಸಿ: ಪಟ್ಟಣದ ಪಂಚಾಯಿತಿಯಿಂದ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ 2 ವರ್ಷಗಳಾದರೂ ನೀಡದೇ ಇರುವುದಕ್ಕೆ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ, ಕೂಡಲೇ ಅವುಗಳನ್ನು ಪೌರಕಾರ್ಮಿರಿಗೆ ವಿತರಿಸುವಂತೆ ಮತ್ತು ಗಿರಿನಗರದ ಸ್ಲಂ ಬೋರ್ಡ್​ ಮನೆಗಳ ಬಗ್ಗೆ ವಿವರ ನೀಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಶಾಲೆಗಳ ಶೌಚಗೃಹಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳುವಂತೆ ಸೂಕ್ತ ಕ್ರಮವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪರಂ ಆದೇಶಿಸಿದರು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಪ್ರಭು, ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ತಹಸೀಲ್ದಾರ್​ ಮಂಜುನಾಥ್​, ತಾಪಂ ಇಒ ಅಪೂರ್ವ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net