

ಗೋಕರ್ಣ: ದೇಶದ ರಕ್ಷಣಾ ಹೊಣೆಹೊತ್ತ ಕಾರವಾರ ಬಳಿಯ ನೌಕಾನೆಲೆ ಸೇರಿ ಉತ್ತರ ಕನ್ನಡದ ಮೂರು ತಾಲೂಕುಗಳಿಗೆ ಜೀವ ಜಲದ ಮೂಲವಾದ ಗಂಗಾವಳಿ ನದಿ ಸಂಪೂರ್ಣ ಬರಿದಾಗಿದೆ.
ಗೋಕರ್ಣ ಮತ್ತು ಸುತ್ತಲಿನ ಆರು ಗ್ರಾಪಂ ವ್ಯಾಪ್ತಿಯಲ್ಲಿನ 32 ಗ್ರಾಮಗಳಿಗೆ ಶುಕ್ರವಾರದಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಜತೆಗೆ ಗಂಗಾವಳಿ ನದಿಯಿಂದ ನೀರನ್ನು ಮೇಲೆತ್ತುವ ಜಾಕ್‌ವೆಲ್ ಘಟಕ ಮತ್ತು ಆಂದ್ಲೆಯಲ್ಲಿರುವ ಬೃಹತ್ ಜಲ ಶುದ್ಧೀಕರಣ ಘಟಕವೂ ಸ್ಥಗಿತಗೊಂಡಿದೆ.
ಐದು ವರ್ಷದ ಹಿಂದೆ ಅಂದರೆ 2019ರಲ್ಲಿ ಇಂತಹುದೇ ಸನ್ನಿವೇಶ ಎದುರಾಗಿತ್ತು. ಕುಡಿಯುವ ನೀರನ್ನು ಮೇಲೆತ್ತುವ ಮರಾಕಲ್ ಜಾಕ್‌ವೆಲ್ ಘಟಕದಲ್ಲಿ ಗಂಗಾವಳಿ ನದಿಯ ನಟ್ಟ ನಡುವೆ ಆಳದಲ್ಲಿ ಸ್ಥಾಪಿಸಿದ್ದ ಬೃಹತ್ ಫುಟ್‌ಬಾಲ್‌ನ ನೀರು ಬರಿದಾಗಿ ನೀರು ಮೇಲೇರುವ ಪ್ರಕ್ರಿಯೆ ಗುರುವಾರ ಕೊನೆಗೊಂಡಿತು.
ಮೂರೂವರೆ ಅಡಿ ಎತ್ತರದ ಈ ಫುಟ್‌ಬಾಲ್ ಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರೆ ಮಾತ್ರ ಘಟಕದಲ್ಲಿನ 250 ಎಚ್‌ಪಿ ಸಾಮರ್ಥ್ಯದ ಎರಡು ಪಂಪ್‌ಗಳಿಂದ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಆದರೆ ಗಂಗಾವಳಿಯ ಹರಿವು ಗುರುವಾರ ಸಂಜೆಯಿಂದ ನಿಂತು ಫುಟ್‌ಬಾಲ್ ಸುತ್ತಲಿನ ಪ್ರದೇಶ ಒಣಗಿದ್ದರಿಂದ ನೀರು ಪೂರೈಕೆ ಬೇಸಿಗೆಯ ಮಧ್ಯದಲ್ಲಿಯೇ ಕೊನೆಗೊಂಡಿತು. ಜತೆಗೆ ಮರಾಕಲ್ ಘಟಕದಿಂದ 17.8 ಕಿಮೀ ದೂರದಲ್ಲಿನ ಆಂದ್ಲೆಯಲ್ಲಿರುವ ಜಿಲ್ಲೆಯ ಅತ್ಯಂತ ದೊಡ್ಡ ಜಲ ಶುದ್ಧೀಕರಣ ಘಟಕವೂ ಕಾರ್ಯ ಚಟುವಟಿಕೆಯನ್ನು ಈ ವರ್ಷದ ಮಟ್ಟಿಗೆ ಸ್ಥಗಿತಗೊಳಿಸುವಂತಾಯಿತು.
ನೀರು ಪೂರೈಕೆ ಕೊನೆಗೊಳ್ಳುತ್ತಿದ್ದಂತೆ ಮರಾಕಲ್‌ನಲ್ಲಿನ ಜಾಕ್‌ವೆಲ್ ಮತ್ತು ಆಂದ್ಲೆಯ ಶುದ್ಧೀಕರಣ ಕೇಂದ್ರಗಳಲ್ಲಿನ ಜಲ ಸಂಗ್ರಹವೂ ಖಾಲಿಯಾಗಿದೆ. ಇದರಿಂದಾಗಿ ಇಲ್ಲಿ ಕಾರ್ಯ ನಿರ್ವಹಿಸುವ 12 ಸಿಬ್ಬಂದಿ ಕೂಡಾ ಬೇರೆಡೆಗಳ ನೀರಿಗೆ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ. ಶುದ್ಧೀಕರಣ ಕೇಂದ್ರದಲ್ಲಿ ಅಗತ್ಯವಿರುವ ಆಮ್ಲಜನಕ ಪೂರೈಕೆಗಾಗಿ ಬೆಳೆಸಲಾದ ಮರ ಗಿಡಗಳೂ ಮೊದಲ ಬಾರಿಗೆ ನೀರಿನ ಅಭಾವಕ್ಕೆ ಬಲಿಯಾಗಿವೆ!
ಕಳೆದ ಎರಡು ವಾರಕ್ಕೂ ಹಿಂದಿನಿಂದಲೇ ಜಿಪಂ ಗ್ರಾ.ಕು.ನೀ.ಸರಬರಾಜು ವಿಭಾಗ ಮತ್ತು ಜಲ ಮಂಡಳಿ ನೀರು ಪೂರೈಕೆಯ ನಿಲುಗಡೆಯ ಸಾಧ್ಯತೆಗಳ ಬಗ್ಗೆ ಎಚ್ಚರಿಸಿತ್ತು. ಟ್ಯಾಂಕರ್‌ನಿಂದ ಎಲ್ಲ ಅಗತ್ಯ ಪ್ರದೇಶಗಳಿಗೆ ನೀರೊದಗಿಸುವ ಬಗ್ಗೆ ಕಳೆದ ಶನಿವಾರ ತಾಲೂಕು ಆಡಳಿತದಿಂದ ಸಂಬಂಧಿಸಿದ ಎಲ್ಲ ಗ್ರಾಪಂ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ತರುವಾಯ ತಾಲೂಕಿನ ಅಗತ್ಯ ಕಡೆಗಳಲ್ಲಿ ನೀರು ಒದಗಿಸಲು ಟ್ಯಾಂಕರ್‌ಗಳಿಗಾಗಿ ಟೆಂಡರ್ ಕರೆದು ಕೆಲ ಟೆಂಡರ್ ಕೂಡ ಬಂದಿದ್ದವು ಎನ್ನಲಾಗಿದೆ. ಆದರೆ ಉಳಿದ ತಾಲೂಕುಗಳಿಗೆ ಹೋಲಿಸಿದಲ್ಲಿ ಟೆಂಡರ್ ದರದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಶುಕ್ರವಾರ ಹೊಸದಾಗಿ ಇ-ಟೆಂಡರ್ ಕರೆದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕುಮಟಾ ತಾಲೂಕಿನ ವಿವಿಧೆಡೆ ಕುಡಿಯುವ ನೀರು ಒದಗಿಸಲು ಟ್ಯಾಂಕರ್‌ಗಳಿಗಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಜನರಿಗೆ ನೀರು ಸರಬರಾಜು ಮಾಡಲು ತಾಲೂಕು ಆಡಳಿತ ಎಲ್ಲ ಏರ್ಪಾಟು ಮಾಡಿಕೊಂಡಿದ್ದು ಜಲ ಅಭಾವವನ್ನು ದೂರವಾಗಿಸಲು ಸರ್ವ ಪ್ರಯತ್ನ ಮಾಡಲಾಗುವುದು.I ಕಲ್ಯಾಣಿ ಕಾಂಬ್ಳೆ, ಉಪವಿಭಾಗೀಯ ಅಧಿಕಾರಿ ಕುಮಟಾ ಗಂಗಾವಳಿ ನದಿ ಬರಿದಾಗುವುದರಿಂದ ಏರುಪೇರಾಗುವ ಮುನ್ಸೂಚನೆಯಿದ್ದರೂ ತ್ವರಿತವಾಗಿ ಅಗತ್ಯ ಕ್ರಮ ಜರುಗಿಸದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ. ಅಲ್ಲದೆ, ವಿಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಸರ್ಕಾರದ ನಡೆಯಿಂದಾಗಿ ನೀರಿನ ಅಭಾವ ಎದುರಾಗಿ ಜನ ಸಂಕಷ್ಟಕ್ಕೀಡಾಗುವಂತಾಗಿದೆ. ಸಾಮಾನ್ಯವಾಗಿ ಮಾರ್ಚ್ ಕೊನೆಯ ಒಳಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲು ಸರ್ಕಾರ ಮುಂದಾಗಬೇಕಿತ್ತು. ನೀರಿನ ಬವಣೆಗೆ ಸಿಲುಕಿರುವ ಜನ ಸಾಮಾನ್ಯರಿಗೆ ನೀರು ಮುಟ್ಟಿಸಲು ವಿಳಂಬ ಮುಂದುವರಿದಲ್ಲಿ ಮುಂದಾಗುವ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಲಿದೆ.I ದಿನಕರ ಶೆಟ್ಟಿ ಶಾಸಕ