ಕೊಡಲಿಯಿಂದ ಕೊಚ್ಚಿ ಕೊಲೆಗೈದ, ಆ ತಲೆ ಹಿಡಿದುಕೊಂಡು ಬಂದು ಪೊಲೀಸರಿಗೆ ಶರಣಾದ

Axe
Published on

ಭುವನೇಶ್ವರ : ತನ್ನ ಸಂಬಂಧಿಯೊಬ್ಬನ ಸಾವಿಗೆ ಕಾರಣಳಾದ ಮಹಿಳೆಯೊಬ್ಬಳ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು 30 ವರ್ಷದ ವ್ಯಕ್ತಿಯೊಬ್ಬ ಒಂದು ಕಿಲೋಮೀಟರ್ ನಡೆದು ಒಡಿಶಾದ ಜಾಜ್‌ಪುರ ಜಿಲ್ಲೆಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ದಾನಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಛತರಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಅನಾರೋಗ್ಯದಿಂದ ಸೋದರಸಂಬಂಧಿ ಸಾವಿಗೀಡಾದ ಕೆಲವು ದಿನಗಳ ನಂತರ ಕಾರ್ತಿಕ್ ಕೇರೈ 62 ವರ್ಷದ ನಂದಿನಿ ಪುರ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಜಾಜಪುರ ರಸ್ತೆಯ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ), ಚಿನ್ಮಯ ನಾಯಕ್ ತಿಳಿಸಿದ್ದಾರೆ.

"ಶವವನ್ನು ವಶಪಡಿಸಿಕೊಂಡು ತನಿಖೆ ಪ್ರಾರಂಭಿಸಿದ್ದೇವೆ. ಘಟನೆಗೆ ಕಾರಣವಾದ ಸಂದರ್ಭ ತಿಳಿಯಲು ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಕೇರೈ ಅವರ ಸೋದರಸಂಬಂಧಿಯೊಬ್ಬ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಮತ್ತು ಸ್ಥಳೀಯವಾಗಿ ಮಾಟ ಮಂತ್ರ ತಿಳಿದಿದ್ದ ಮಹಿಳೆಯ ಬಳಿ ಆತನನ್ನು ಚಿಕಿತ್ಸೆಗೆ ಕರೆದೊಯ್ದಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಆತ ಗುಣಮುಖನಾಗುತ್ತಾನೆ ಎಂದು ಆಕೆ ಭರವಸೆ ನೀಡಿದ ನಂತರ ಕೇರೈ ಮತ್ತು ಅವನ ಸೋದರಸಂಬಂಧಿ ಮನೆಗೆ ಮರಳಿಳಿದ್ದಾರೆ.

ಆದರೆ ಆ ರೋಗಿಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತ ಬಂದು ಕಟಕ್‌ನ ಎಸ್‌ಸಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆತ ಆಸ್ಪತ್ರೆಯಲ್ಲಿ ನಿಧನನಾದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net