ಏಕಕಾಲದಲ್ಲಿ ನಡೆಯಲಿವೆ ಕೊನೇ 2 ಐಪಿಎಲ್ ಲೀಗ್ ಪಂದ್ಯಗಳು, ಕಾರಣವೇನು ಗೊತ್ತೇ?

ipl web
Published on

ನವದೆಹಲಿ: ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪ್ರೇಮಿಗಳಿಗೆ ಏಕಕಾಲದಲ್ಲಿ 2 ಪಂದ್ಯಗಳನ್ನು ಸವಿಯುವ ಅದೃಷ್ಟ ಸಿಗಲಿದೆ. ಜತೆಗೆ ಯಾವ ಪಂದ್ಯವನ್ನು ನೋಡುವುದು ಎಂಬ ಗೊಂದಲವೂ ಕಾಡಲಿದೆ! ಯಾಕೆಂದರೆ ಹಾಲಿ ಆವೃತ್ತಿಯ ಕೊನೇ 2 ಲೀಗ್ ಪಂದ್ಯಗಳನ್ನು ಏಕಕಾಲದಲ್ಲಿ ಅಂದರೆ ರಾತ್ರಿ 7.30ರಿಂದ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

ಅಕ್ಟೋಬರ್ 8ರಂದು ಟೂರ್ನಿಯ ಕೊನೇ 2 ಲೀಗ್ ಪಂದ್ಯಗಳು ನಿಗದಿಯಾಗಿದ್ದು, ಸನ್‌ರೈಸರ್ಸ್‌-ಮುಂಬೈ ಮತ್ತು ಆರ್‌ಸಿಬಿ-ಡೆಲ್ಲಿ ನಡುವಿನ ಪಂದ್ಯಗಳು ಕ್ರಮವಾಗಿ ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮುನ್ನ ಸನ್‌ರೈಸರ್ಸ್‌-ಮುಂಬೈ ಪಂದ್ಯ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿತ್ತು.

ಈ ಬಾರಿ ಪ್ಲೇಆಫ್​ ಹಂತಕ್ಕೇರುವ ತಂಡಗಳ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಯಾವುದೇ ತಂಡಕ್ಕೆ ನೆಟ್ ರನ್‌ರೇಟ್ ಲೆಕ್ಕಾಚಾರದ ಲಾಭ ಸಿಗದಂತೆ ಮಾಡುವುದು ಬಿಸಿಸಿಐನ ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಕೊನೆಯಲ್ಲಿ ಆಡುವ 2 ತಂಡಗಳಷ್ಟೇ ರನ್‌ರೇಟ್ ಲೆಕ್ಕಾಚಾರಕ್ಕೆ ತಕ್ಕಂತೆ ಆಡಬಹುದಾದ ಲಾಭವನ್ನು ತಪ್ಪಿಸುವುದು ಕೂಡ ಇದರ ಉದ್ದೇಶವಾಗಿದೆ. ಏಕಕಾಲದಲ್ಲಿ ಪಂದ್ಯ ನಡೆಯುವುದರಿಂದ ನೆಟ್ ರನ್‌ರೇಟ್ ಬಗ್ಗೆ ಪಂದ್ಯಗಳು ಮುಗಿದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ.

ಫಿಫಾ ವಿಶ್ವಕಪ್ ಮಾದರಿ: ಫುಟ್‌ಬಾಲ್‌ನಲ್ಲಿ ಫಿಫಾ ವಿಶ್ವಕಪ್ ಅಥವಾ ಯುರೋಕಪ್‌ನಂಥ ಪ್ರಮುಖ ಟೂರ್ನಿಗಳಲ್ಲಿ ಗುಂಪು ಹಂತದ ಕೊನೇ ಲೀಗ್ ಪಂದ್ಯಗಳನ್ನು ಏಕಕಾಲದಲ್ಲಿ ಆಡುವ ನಿಯಮವಿದೆ. ಫಿಕ್ಸಿಂಗ್ ಅಪಾಯ ತಪ್ಪಿಸುವುದು ಅಥವಾ ಗೋಲು ಲೆಕ್ಕಾಚಾರದಂತೆ ಆಡುವುದು ಅಥವಾ ಸುಲಭ ಎದುರಾಳಿ ಸಿಗುವಂತೆ ಮಾಡಲು ತಂಡವೊಂದು ಬೇಕೆಂದೇ ಪಂದ್ಯ ಸೋಲುವ ಸಾಧ್ಯತೆಗಳನ್ನು ದೂರ ಮಾಡುವ ಸಲುವಾಗಿ ಫುಟ್‌ಬಾಲ್‌ನಲ್ಲಿ ಈ ನಿಯಮವಿದೆ. ಇದೇ ಮಾದರಿಯನ್ನು ಈಗ ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲೂ ಅಳವಡಿಸಿಕೊಳ್ಳಲಾಗಿದೆ ಎನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net