ಸುಳ್ಯ: ನಕಲಿ ಪಡಿತರ ಚೀಟಿದಾರರ ಪತ್ತೆಗೆ ಸರ್ಕಾರ ಕ್ರಮ ಕೈಗೊಂಡಿದ್ದು ಸುಳ್ಯ ತಾಲೂಕಿನಲ್ಲಿ ಒಟ್ಟು 2998 ಕಾರ್ಡ್‌ದಾರರನ್ನು ಗುರುತಿಸಿ ನೋಟಿಸ್ ಜಾರಿ ಮಾಡಲಾಗಿದೆ.
ಇದರಲ್ಲಿ 42 ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಈ ಪೈಕಿ 257 ಕುಟುಂಬವು ಆದಾಯ ತೆರಿಗೆ ಪಾವತಿಸಿದ್ದು, ಇವುಗಳಲ್ಲಿ 9 ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಮಾಡಲಾಗಿದೆ. ಅಲ್ಲದೆ 136 ಬಿಪಿಎಲ್ ಪಡಿತರ ಚೀಟಿ ದಾರರು ಅರ್ಹತೆಗಿಂತ ಹೆಚ್ಚಿನ ಆದಾಯ ಹೊಂದಿರುವ ಆದಾಯ ಪ್ರಮಾಣಪತ್ರದ ಮೂಲಕ ಗುರುತಿಸಲಾಗಿದ್ದು, ಇವುಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ಈಗಾಗಲೇ ಸರ್ಕಾರದ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ಮಾಹಿತಿ ಒದಗಿಸುವಂತೆ ಆಹಾರ ಇಲಾಖೆ ಕೇಳಿಕೊಂಡಿದ್ದು ಅವರು ಸಮಯಾವಕಾಶವನ್ನು ಕೇಳಿದ್ದಾರೆ. ಮುಂದೆ ಪ್ರಕ್ರಿಯೆಗಳು ನಡೆಯಲಿದ್ದು, ಕೆಲ ಪಡಿತರ ಚೀಟಿದಾರರು ಮಾಹಿತಿ ಒದಗಿಸಿದ್ದು ಅವುಗಳ ಕಡತವನ್ನು ರಚಿಸಲಾಗಿದೆ.
ಸರ್ಕಾರದ ವಿಶೇಷ ತಂಡ ಆಗಮಿಸಿ ಪರಿಶೀಲನೆ ನಡೆಸಲಿದ್ದು, ಸರ್ಕಾರ ನೀಡಿರುವ 2998 ಕುಟುಂಬಗಳ ಮಾಹಿತಿಯನ್ನು ಪರಿಶೀಲನೆ ನಡೆಸಲಿದೆ. 6 ತಿಂಗಳುಗಳಿಂದ ಪಡಿತರ ಅಕ್ಕಿ ಪಡೆಯದೆ ಇರುವ 126 ಚೀಟಿಗಳು ರದ್ದಾಗಿವೆ. ಸುಳ್ಯ ತಾಲೂಕಿನಲ್ಲಿ 1382 ಅಂತ್ಯೋದಯ ಪಡಿತರ ಚೀಟಿ ಇದ್ದು ಅವುಗಳಲ್ಲಿ ಕೆಲವರು ಬಿಪಿಎಲ್‌ಗೆ ಪರಿವರ್ತನೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೆಲವು ಕಾರ್ಡ್‌ಗಳು ಕೆವೈಸಿ ಮತ್ತು ಬ್ಯಾಂಕ್‌ಗೆ ಆಧಾರ್ ಲಿಂಕ್ ಮಾಡದೆ ಇದ್ದಲ್ಲಿ ಪಡಿತರ ಅಕ್ಕಿಯ ಹಣ ಬಾರದೆ ಇರಬಹುದು ಎಂದು ಆಹಾರ ನಿರೀಕ್ಷಕಿ ಅನಿತಾ ಟಿ.ಎ. ತಿಳಿಸಿದ್ದಾರೆ.