

Navi Mumbai: 25 ವರ್ಷದ ಯುವಕನೊಬ್ಬ ರಬಾಲೆ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವಿ ಮುಂಬೈನಲ್ಲಿ (ಜುಲೈ 29) ಮಂಗಳವಾರ ನಡೆದಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.
ನವಿ ಮುಂಬೈ MIDC ಪ್ರದೇಶದ ಬೀಮ್ ನಗರದ ನಿವಾಸಿ ಅಶ್ವಕ್ ಮುಷ್ತಾಕ್ ಅಹ್ಮದ್(26) ಮೃತ. ಅಶ್ವಕ್ ಸರೋವರದ ಬಳಿ ಇರುವ ದಂಡೆಯ ಮೇಲೆ ಸ್ವಲ್ಪ ಸಮಯದವರೆಗೆ ಕಾಲ ಕಳೆದಿದ್ದು, ಇದ್ದಕ್ಕಿಂದತೆಯೇ ವೇಗವಾಗಿ ಓಡಿ ಬಂದು ಆ ಸುರಕ್ಷತಾ ತಡೆಗೋಡೆಯ ಮೇಲಿಂದ ಹಾರಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತ ದೇಹವನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನ ಬಳಿಕ ಇಂದು(ಜು.30) ಬೆಳಗ್ಗೆ 10 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ.
ಅಶ್ವಕ್ ಮುಷ್ತಾಕ್ ಅಹ್ಮದ್ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)