

| ರಮೇಶ ದೊಡ್ಡಪುರ ಬೆಂಗಳೂರು
ಸಾಂಪ್ರದಾಯಿಕ ಹಾಗೂ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಹೊರತಾಗಿಯೂ ದಿನದ 24 ಗಂಟೆ ಎಲ್ಲ ಮನೆಗಳಿಗೂ ವಿದ್ಯುತ್ ನೀಡುವ ವಾಗ್ದಾನವನ್ನು ಮಾತ್ರ ರಾಜ್ಯ ಸರ್ಕಾರಗಳು ಈವರೆಗೆ ಉಳಿಸಿಕೊಂಡಿಲ್ಲ. ದೆಹಲಿ ಮೂಲದ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ವೆುಂಟ್(ಸಿಎಸ್ಸಿ) ಸಂಸ್ಥೆ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಎನ್ವಿರಾನ್ವೆುಂಟ್-2021’ ವರದಿಯಲ್ಲಿ ಹಳ್ಳಿಗಳನ್ನು ಬೆಳಗಿಸುವ ವಿಚಾರದಲ್ಲಿ ಕರ್ನಾಟಕ ಹಿಂದೆ ಬಿದ್ದಿರುವ ಸತ್ಯ ಬಹಿರಂಗಗೊಂಡಿದೆ.
ರಾಜ್ಯದ ನಗರ ಪ್ರದೇಶಗಳಲ್ಲಿ ಪ್ರತಿದಿನ ಸರಾಸರಿ 23.50 ಗಂಟೆ ವಿದ್ಯುತ್ ನೀಡಲಾಗುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಕೇವಲ 17.03 ಗಂಟೆ ವಿದ್ಯುತ್ ಬೆಳಗುತ್ತಿದೆ. ಆಂಧ್ರಪ್ರದೇಶದ ನಗರ ಪ್ರದೇಶಗಳಲ್ಲಿ ಪ್ರತಿದಿನ 23.55 ಗಂಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 23.36 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಅದೇ ಕೇರಳ ಕ್ರಮವಾಗಿ 23.59 ಹಾಗೂ 21.48, ತಮಿಳುನಾಡು 23.58 ಹಾಗೂ 21.59 ಗಂಟೆ ವಿದ್ಯುತ್ ನೀಡುತ್ತಿವೆ. ಆದರೆ ಕರ್ನಾಟಕ ಮಾತ್ರ ನಗರದಲ್ಲಿ ಸರಾಸರಿ 23.50 ಗಂಟೆ ಹಾಗೂ ಗ್ರಾಮೀಣದಲ್ಲಿ ಕೇವಲ 17.03 ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ.
ಕೃತಿಯಾಗದ ಮಾತು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2018ರ ಏಪ್ರಿಲ್ನಲ್ಲಿ ದೇಶದ ಎಲ್ಲ ಹಳ್ಳಿಗೂ ವಿದ್ಯುತ್ ತಲುಪಿಸಿತು. 2019ರೊಳಗೆ ದಿನದ 24 ಗಂಟೆಯೂ ವಿದ್ಯುತ್ ನೀಡುವ ಸಲುವಾಗಿ ವಿದ್ಯುತ್ ಯೋಜನೆ ಜಾರಿ ಮಾಡಲಾಯಿತು. 2015ರಲ್ಲಿ ಕರ್ನಾಟಕದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 2018-19ರೊಳಗೆ ಎಲ್ಲ ಮನೆ, ವಾಣಿಜ್ಯ, ಕೃಷಿ ಹಾಗೂ ಕೈಗಾರಿಕೆಗಳಿಗೆ ಗುಣಮಟ್ಟದ ಹಾಗೂ ಕಡಿಮೆ ದರದ ವಿದ್ಯುತ್ ನೀಡಲಾಗುತ್ತದೆ. ನಿರೀಕ್ಷಿತ ಗುರಿಗಿಂತ ಮೊದಲೇ ಸಾಧನೆ ಮಾಡಲಾಗುವುದು ಎಂದು ಕೇಂದ್ರಕ್ಕೆ ತಿಳಿಸಿತ್ತು. ಈ ಒಪ್ಪಂದಕ್ಕೆ ಅಂದಿನ ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಹಾಲಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಂಕಿತ ಹಾಕಿದ್ದರು.
ಉತ್ಪಾದನೆಯಲ್ಲಿ ಮುಂದೆ: ಇಂಧನ ಕುರಿತು ಸಂಸತ್ತಿನ ಸ್ಥಾಯಿ ಸಮಿತಿ 2021ರ ಮಾರ್ಚ್ನಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಕ್ಕೆ ಸಲ್ಲಿಸಿದ 17ನೇ ವರದಿಯ ಪ್ರಕಾರ, ಕರ್ನಾಟಕ 2022ರ ವೇಳೆಗೆ 5,697 ಮೆ. ವ್ಯಾ. ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದುವ ಗುರಿ ಇರಿಸಿಕೊಂಡಿತ್ತು. ಆದರೆ 2021ರಲ್ಲೇ ಶೇ.129 ಸಾಧನೆ ಆಗಿದೆ. ಅದೇ ರೀತಿ ಜೈವಿಕ ವಿದ್ಯುತ್ ಉತ್ಪಾದನೆಯಲ್ಲಿ ಗುರಿ ಇದ್ದ 1,420 ಮೆ. ವ್ಯಾ.ಗಿಂತ ಶೇ.133, ಪವನ ವಿದ್ಯುತ್ನಲ್ಲಿ ಗುರಿಯಿದ್ದ 6,200 ಮೆ.ವ್ಯಾ.ನಲ್ಲಿ ಶೇ.79 ಸಾಧನೆ ಮಾಡಲಾಗಿದೆ.
ಗ್ರಾಮೀಣ ಪ್ರದೇಶಕ್ಕೂ ವಿದ್ಯುತ್ ಅಗತ್ಯವಾಗಿದೆ. ವಿದ್ಯುತ್ ಇಲ್ಲದೆ ಕೃಷಿ, ಕುಡಿಯುವ ನೀರು, ಕೈಗಾರಿಕೆಗಳ ಕಾರ್ಯಕ್ಕೆ ಧಕ್ಕೆಯಾಗುತ್ತದೆ. ಪರ್ಯಾಯ ಹಾಗೂ ನವೀಕರಿಸಬಹುದಾದ ಇಂಧನದ ಕತೆಗೆ ಮತ್ತಷ್ಟು ಆಸಕ್ತಿ, ಸಂಶೋಧನೆಗಳು ನಡೆಯಬೇಕಿದೆ. ಸರ್ಕಾರದ ಜತೆಗೆ ಜನರು, ಸಂಸ್ಥೆಗಳೂ ಕೈಜೋಡಿಸಿದರೆ ಸಂಪೂರ್ಣ ವಿದ್ಯುದೀಕರಣ ಸಾಧ್ಯ.
| ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಕುಲಪತಿ