ಪ್ರತಿ ಡಾಲರ್​ಗೆ 83 ರೂ. ವಿನಿಮಯ ದರ; ಮಂಗಳವಾರದ ವಹಿವಾಟಿನಲ್ಲಿ 22 ಪೈಸೆ ಕುಸಿತ ಷೇರು ಪೇಟೆಯಲ್ಲಿ ಚೇತರಿಕೆ

Dollor
Published on

ನವದೆಹಲಿ: ಮಂಗಳವಾರ ರೂಪಾಯಿ ಮೌಲ್ಯ 22 ಪೈಸೆ ಕುಸಿತವಾಗಿ ಡಾಲರ್ ಎದುರು ಅದರ ಮೌಲ್ಯ 83 ರೂ.ಗೆ ಮುಟ್ಟಿದೆ. ಈ ಹಿಂದೆ ಅಕ್ಟೋಬರ್ 19ರಂದು ರೂಪಾಯಿ ಮೌಲ್ಯ ತೀವ್ರ ಇಳಿಕೆಯಾಗಿ ಪ್ರತಿ ಡಾಲರ್ ವಿನಿಮಯ ದರ 83 ರೂಪಾಯಿ ದಾಟಿತ್ತು.

ಅಂತರ್​ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯ ಸೋಮವಾರ ವಹವಾಟಿನಲ್ಲಿ 82.78 ರೂ. ಇದ್ದ ವಿನಿಮಯ ದರ, ಮಂಗಳವಾರ ಧನಾತ್ಮಕವಾಗಿ 82.69 ರೂ.ನೊಂದಿಗೆ ವಹಿವಾಟು ಆರಂಭಿಸಿತು. ಆದರೆ, ಇದೇ ವೇಗವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿ 83 ರೂ.ಗಳಲ್ಲಿ ಕೊನೆಗೊಂಡಿತು.

ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾದಷ್ಟು ಆಮದಿನ ಬಾಬ್ತು ಏರುತ್ತದೆ. ವಿದೇಶದಲ್ಲಿ ವ್ಯಾಸಂಗ ದುಬಾರಿ ಆಗುತ್ತದೆ. ತೈಲ ಖರೀದಿಗೆ ಹೆಚ್ಚಿನ ಹಣ ತೆರಬೇಕಾಗುತ್ತದೆ. ಇದೇ ವೇಳೆ ರಫ್ತುದಾರರಿಗೆ ಲಾಭವೂ ಆಗುತ್ತದೆ.

ಷೇರು ಪೇಟೆ ಚೇತರಿಕೆ: ಜಾಗತಿಕ ಮಾರುಕಟ್ಟೆಯಲ್ಲಿನ ಚೇತರಿಕೆಗೆ ಅನುಗುಣವಾಗಿ ಮಂಗಳವಾರ ಭಾರತದಲ್ಲಿಯೂ ಚೇತರಿಕೆ ದಾಖಲಾಗಿದೆ. ಬಿಎಸ್​ಇ ಸೆನ್ಸೆಕ್ಸ್​ನಲ್ಲಿ 126.41 ಅಂಶ ಏರಿಕೆಯಾಗಿ 61,294.20ರಲ್ಲಿ ಅಂತ್ಯಗೊಂಡಿತು. ದಿನದ ವ್ಯವಹಾರದಲ್ಲಿ ಅದು ಗರಿಷ್ಠ 61,343.96 ಮತ್ತು ಕನಿಷ್ಠ 61,004.04 ಅಂಕಕ್ಕೆ ತಲುಪಿತ್ತು. ಎನ್​ಎಸ್​ಇ ನಿಫ್ಟಿ 35.10 ಅಂಶ ಏರಿಕೆಯಾಗಿ 18,232.55 ಅಂಕದಲ್ಲಿ ದಿನದ ವ್ಯವಹಾರ ಮುಗಿಸಿತು. ಸೆನ್ಸೆಕ್ಸ್ ವಿಭಾಗದಲ್ಲಿ ಆಕ್ಸಿಸ್ ಬ್ಯಾಂಕ್, ಟೈಟಾನ್, ಟಿಸಿಎಸ್, ಟೆಕ್ ಮಹೀಂದ್ರ, ಇಂಡಸ್​ಇಂಡ್ ಬ್ಯಾಂಕ್, ವಿಪ್ರೊ, ನೆಸ್ಲೆ ಮತ್ತು ಬಜಾಜ್ ಫೈನಾನ್ಸ್ ಹೆಚ್ಚಿನ ಲಾಭ ಪಡೆದವು.

ಎಂಪಿಎಸ್ ವಿನಾಯಿತಿ: ಭಾರತೀಯ ಕಂಪನಿಗಳಿಗೆ ಕನಿಷ್ಠ ಸಾರ್ವಜನಿಕ ಷೇರುದಾರಿಕೆ (ಎಂಪಿಎಸ್) ನಿಯಮದಿಂದ ವಿನಾಯಿತಿ ನೀಡುವುದನ್ನು ಮುಂದುವರಿಸಲು ಭಾರತೀಯ ಷೇರುಮಾರುಕಟ್ಟೆ ನಿಯಂತ್ರಣ ಸಂಸ್ಥೆ (ಸೆಬಿ) ನಿರ್ಧರಿಸಿದೆ ಎಂದು ಸರ್ಕಾರ ಸೋಮವಾರ ತಡ ರಾತ್ರಿ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ. ಅನೇಕ ವರ್ಷಗಳಿಂದ ಈ ವಿನಾಯಿತಿ ಜಾರಿಯಲ್ಲಿದೆ. ಈ ನಿಯಮದ ಪ್ರಕಾರ ಲಿಸ್ಟೆಡ್ ಕಂಪನಿಗಳು ಶೇಕಡ 25ರಷ್ಟು ಸಾರ್ವಜನಿಕ ಷೇರು ಹೊಂದಿರಬೇಕಾಗುತ್ತದೆ.

ಮೂಲಸೌಕರ್ಯ ಬಾಂಡ್: 2023ನೇ ಹಣಕಾಸು ವರ್ಷದಲ್ಲಿ 10,000 ಕೋಟಿ ರೂಪಾಯಿ ನಿಧಿಯನ್ನು ಮೂಲಸೌಕರ್ಯ ಬಾಂಡ್ ಮೂಲಕ ಕ್ರೋಡೀಕರಿಸುವುದಾಗಿ ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್​ಬಿಐ ಮಂಗಳವಾರ ಪ್ರಕಟಿಸಿದೆ. ಮಂಗಳವಾರ ನಡೆದ ಬ್ಯಾಂಕ್​ನ ಕೇಂದ್ರೀಯ ಮಂಡಳಿಯ ಕಾರ್ಯನಿರ್ವಾಹಕ ಸಭೆ ಬಗ್ಗೆ ನಿರ್ಧಾರ ಕೈಗೊಂಡಿದೆ.

ಇಂಧನಗಳ ವಿಂಡ್​ಫಾಲ್ ತೆರಿಗೆ ಏರಿಕೆ: ಕಚ್ಚಾ ತೈಲ, ಡೀಸೆಲ್ ಮತ್ತು ವೈಮಾನಿಕ ಇಂಧನಗಳ (ಎಟಿಎಫ್) ಅನಿರೀಕ್ಷಿತ ಲಾಭದ ಮೇಲಿನ ತೆರಿಗೆಯನ್ನು (ವಿಂಡ್​ಫಾಲ್ ಟ್ಯಾಕ್ಸ್) ಮಂಗಳವಾರದಿಂದಲೇ ಜಾರಿಗೆ ಬರುವಂತೆ ಸರ್ಕಾರ ಏರಿಕೆ ಮಾಡಿದೆ. ಪ್ರತಿ ಟನ್ ಕಚ್ಚಾ ತೈಲದ ಮೇಲಿನ ವಿಂಡ್​ಫಾಲ್ ತೆರಿಗೆಯನ್ನು 1,700 ರೂಪಾಯಿಯಿಂದ 2,100 ರೂ.ಗೆ ಏರಿಸಿ ಆದೇಶ ಹೊರಡಿಸಲಾಗಿದೆ. ಡೀಸೆಲ್ ತೆರಿಗೆಯನ್ನು 5 ರೂ.ನಿಂದ 7.50 ರೂ.ಗೆ ಹಾಗೂ ಪ್ರತಿ ಲೀಟರ್ ಎಟಿಎಫ್ ವಿಂಡ್​ಫಾಲ್ ತೆರಿಗೆಯನ್ನು 1.5 ರೂ.ನಿಂದ 4.5 ರೂ.ಗೆ ಏರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net