2023-27ರ ಐಪಿಎಲ್ ಪ್ರಸಾರ ಹಕ್ಕು ಮಾರಾಟಕ್ಕೆ ಬಿಸಿಸಿಐ ಸಿದ್ಧತೆ, ₹50 ಸಾವಿರ ಕೋಟಿ ನಿರೀಕ್ಷೆ!

ipl web
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ಟೂರ್ನಿಯ ಮುಂದಿನ 5 ವರ್ಷಗಳ ನೇರಪ್ರಸಾರ-ಡಿಜಿಟಲ್ ಹಕ್ಕು ಒಳಗೊಂಡ ಮಾಧ್ಯಮ ಹಕ್ಕು ಮಾರಾಟಕ್ಕೆ ಬಿಸಿಸಿಐ ಸಿದ್ಧವಾಗಿದೆ. ಸ್ಟಾರ್-ಡಿಸ್ನಿ ಇಂಡಿಯಾ, ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್, ರಿಲಯನ್ಸ್ ಇಂಡಸ್ಟ್ರೀಸ್‌ನ ವಿಯಾಕಾಮ್18 ಮತ್ತು ಅಮೆಜಾನ್‌ನಂತ ಪ್ರತಿಷ್ಠಿತ ಕಂಪನಿಗಳು ಈ ಹಕ್ಕು ಖರೀದಿಗೆ ಪೈಪೋಟಿಯಲ್ಲಿದ್ದು, ಬಿಸಿಸಿಐ ಖಜಾನೆಗೆ ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಹರಿದುಬರುವ ನಿರೀಕ್ಷೆ ಹರಡಿದೆ.

2023ರಿಂದ 2027ರವರೆಗಿನ ಐಪಿಎಲ್ ಮಾಧ್ಯಮ ಹಕ್ಕು ಮಾರಾಟಕ್ಕೆ ಟೆಂಡರ್ ಆಹ್ವಾನಿಸಲು ಬಿಸಿಸಿಐ ಸಜ್ಜಾಗುತ್ತಿದ್ದು, ಇ-ಹರಾಜು ಪ್ರಕ್ರಿಯೆಯ ಮೂಲಕ ಹಕ್ಕು ಮಾರಾಟ ಮಾಡಲು ಸಿದ್ಧತೆ ನಡೆದಿದೆ. ಕಳೆದ ಸಾಲಿನ ಮಾರಾಟ ಮೊತ್ತಕ್ಕಿಂತ ಈ ಬಾರಿ 3 ಪಟ್ಟು ಅಧಿಕ ಮೊತ್ತಕ್ಕೆ ಮಾಧ್ಯಮ ಹಕ್ಕು ಮಾರಾಟವಾಗುವ ಲೆಕ್ಕಾಚಾರವನ್ನು ಬಿಸಿಸಿಐ ಹಾಕಿಕೊಂಡಿದೆ.

ಈ ಹಿಂದೆ 2018ರಿಂದ 2022ರವರೆಗಿನ 5 ವರ್ಷಗಳ ನೇರಪ್ರಸಾರ ಹಕ್ಕನ್ನು ಸ್ಟಾರ್ ಇಂಡಿಯಾ 16,347 ಕೋಟಿ ರೂ.ಗೆ ಖರೀದಿಸಿತ್ತು. ಈ ಬಾರಿ ಇದರ ಮೂರು ಪಟ್ಟು ಅಂದರೆ ಸುಮಾರು 50 ಸಾವಿರ ಕೋಟಿ ರೂ. ಮೊತ್ತಕ್ಕೆ ಹಕ್ಕು ಮಾರಾಟವಾಗುವ ಬಗ್ಗೆ ಮಾರುಕಟ್ಟೆ ತಜ್ಞರೂ ಭವಿಷ್ಯ ನುಡಿದಿದ್ದಾರೆ. ಕನಿಷ್ಠ 32 ಸಾವಿರ ಕೋಟಿ ರೂ. ಮೊತ್ತವನ್ನೂ ಖಚಿತ ಎನ್ನಲಾಗಿದೆ. ಮುಂದಿನ ಐಪಿಎಲ್ ಟೂರ್ನಿ ಸಮಯದಲ್ಲೇ ಅಂದರೆ ಏಪ್ರಿಲ್-ಮೇನಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ.

ಮೊತ್ತ ಹೆಚ್ಚಳ ಯಾಕೆ?

ಇದೀಗ ಐಪಿಎಲ್‌ನಲ್ಲಿ ಆಡುವ ತಂಡಗಳ ಸಂಖ್ಯೆ 10ಕ್ಕೇರಿದ್ದು, ಮುಂದಿನ ವರ್ಷದಿಂದ ಟೂರ್ನಿಯ ಒಟ್ಟು ಪಂದ್ಯಗಳ ಸಂಖ್ಯೆಯೂ 94ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಗಳ ನೇರಪ್ರಸಾರದಿಂದ ಬರುವ ಆದಾಯವೂ ಹೆಚ್ಚಳವಾಗಲಿದ್ದು, ಸಹಜವಾಗಿಯೇ ಅದರ ಹಕ್ಕಿನ ಮೌಲ್ಯವೂ ಹೆಚ್ಚಾಗುತ್ತಿದೆ.

ಐಪಿಎಲ್ ಪ್ರಸಾರ ಹಕ್ಕು

2008-17: ₹8,200 ಕೋಟಿ

2018-22: ₹16,347 ಕೋಟಿ

ಪೈಪೋಟಿಯಲ್ಲಿ ರಿಲಯನ್ಸ್, ಅಮೆಜಾನ್

ಸ್ಟಾರ್ ಇಂಡಿಯಾ ಮತ್ತು ಸೋನಿ ನೆಟ್‌ವರ್ಕ್ ಈ ಹಿಂದಿನಿಂದಲೂ ಐಪಿಎಲ್ ಪ್ರಸಾರ ಹಕ್ಕಿನ ಖರೀದಿಗೆ ನಿಕಟ ಪೈಪೋಟಿ ನಡೆಸುತ್ತಿದ್ದವು. 2008ರಿಂದ 2017ರವರೆಗೆ ಸೋನಿ ವಶದಲ್ಲಿದ್ದ ಹಕ್ಕು, 2018ರಲ್ಲಿ ಸ್ಟಾರ್‌ಗೆ ಒಲಿದಿತ್ತು. ಈ ಬಾರಿ ರಿಲಯನ್ಸ್ (ವಿಯಾಕಾಮ್18) ಮತ್ತು ಅಮೆಜಾನ್ ಕೂಡ ಐಪಿಎಲ್ ಪ್ರಸಾರ ಹಕ್ಕು ಖರೀದಿಗೆ ಭಾರಿ ಪೈಪೋಟಿ ಒಡ್ಡಲು ಸಜ್ಜಾಗಿವೆ. ರಿಲಯನ್ಸ್ ಹೊಸ ಕ್ರೀಡಾ ಚಾನಲ್ ಆರಂಭಿಸುವ ಸಿದ್ಧತೆಯಲ್ಲಿದ್ದು, ಅದಕ್ಕೆ ಐಪಿಎಲ್ ಪ್ರಸಾರ ಹಕ್ಕು ದೊಡ್ಡ ಮಾರುಕಟ್ಟೆ ತಂದುಕೊಡಲಿದೆ. ಇನ್ನು ಒಟಿಟಿ ಕಂಪನಿ ಅಮೆಜಾನ್ ಪ್ರೈಮ್‌ಗೂ ಭಾರತದಲ್ಲಿ ಬಳಕೆದಾರರ ಸಂಖ್ಯೆ ಹಿಗ್ಗಿಸಲು ಐಪಿಎಲ್ ದೊಡ್ಡ ಅಸವಾಗಲಿದೆ. ಆದರೆ ಟಿವಿಯಲ್ಲೂ ಐಪಿಎಲ್ ಪ್ರಸಾರವಾಗಬೇಕೆಂದು ಬಿಸಿಸಿಐ ಬಯಸುವುದರಿಂದ ಅಮೆಜಾನ್, ಟಿವಿ ಚಾನಲ್ ಒಂದರ ಜತೆಗೂ ಪಾಲುದಾರಿಕೆ ಹೊಂದುವುದು ಅಗತ್ಯವಾಗಿದೆ. ಇತ್ತ ಸ್ಟಾರ್‌ಗೂ ಭಾರತದಲ್ಲಿ ಡಿಸ್ನಿ-ಹಾಟ್‌ಸ್ಟಾರ್ ಬಳಕೆದಾರರನ್ನು ಸೆಳೆಯಲು ಐಪಿಎಲ್ ಪ್ರಮುಖ ಅಸ ಎಂಬುದು ಈಗಾಗಲೆ ಸಾಬೀತಾಗಿದೆ. ಹೀಗಾಗಿ ಅದೂ ಹಕ್ಕು ಬಿಟ್ಟುಕೊಡಲು ಸಿದ್ಧವಿಲ್ಲ. ಇನ್ನು ಸೋನಿ ಸಂಸ್ಥೆ ಈಗ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಜತೆಗೆ ವಿಲೀನವಾಗಿದ್ದು, ಐಪಿಎಲ್ ಹಕ್ಕು ಮರಳಿ ಪಡೆಯಲು ದೊಡ್ಡ ಮೊತ್ತದ ಬಿಡ್ ಯೋಜನೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net