

ತುಮಕೂರು: ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ
ಪಡಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿರುವ 61 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದರು.
ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ 7560 ಕೋಟಿ ರೂ. ಮೀಸಲಿರಿಸಲಾಗಿದೆ. ಇದುವರೆಗೂ ಪ್ರತಿ ವರ್ಷ 5 ಸಾವಿರ ಕೋಟಿ ರೂ. ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ಈ ಮೊತ್ತವನ್ನು 7560 ರೂ.ಗೆ ಹೆಚ್ಚಿಸಲಾಗಿದೆ ಎಂದರು. ರಾಜ್ಯದಲ್ಲಿ 118 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತ ರೈಲ್ವೆ ನಿಲ್ದಾಣಗಳನ್ನು ನಿಮಾರ್ಣ ಮಾಡಲಾಗುತ್ತಿದೆ. ಬೆಂಗಳೂರಿನ ಕಂಟೋನ್ಮೆಂಟ್, ಯಶವಂತಪುರ ಸೇರಿ ಇನ್ನಿತರ ವ್ಯವಸ್ಥಿತ ರೈಲ್ವೆ ನಿಲ್ದಾಣಗಳ ನಿಮಾರ್ಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ತುಮಕೂರು ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಗುಬ್ಬಿ ರೈಲ್ವೆ ನಿಲ್ದಾಣಕ್ಕೆ 7 ಕೋಟಿ ರೂ. ಹಾಗೂ ಶ್ರವಣಬೆಳಗೊಳ ರೈಲ್ವೆ ನಿಲ್ದಾಣವನ್ನು 9 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು ಎಂದರು.
ರಾಜಕಾರಣ, ದ್ವೇಷ ಮಾಡಲು ಬಂದಿಲ್ಲ : ರಾಜಕಾರಣದಲ್ಲಿ 45 ವರ್ಷದಿಂದ ಇದ್ದೇನೆ. ಈಗ ತುಮಕೂರಿಗೆ ರಾಜಕಾರಣ ಮಾಡಲು, ದ್ವೇಷ ಮಾಡಲು ಬಂದಿಲ್ಲ. ಏನಾದರೂ ಮಾಡಿ ತುಮಕೂರು ಕ್ಷೇತ್ರದ ಚಿತ್ರಣ ಬದಲಾಯಿಸಬೇಕು ಎಂಬುದು ನನ್ನ ಧ್ಯೇಯ. ಕೇಂದ್ರ ಸರ್ಕಾರದ ಅನುದಾನವನ್ನು ಸರಿಯಾಗಿ ವಿನಿಯೋಗ ಮಾಡಲು ರಾಜ್ಯ ಸರ್ಕಾರದ ಸಹಕಾರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಕಾಯೊರ್ನ್ಮುಖರಾಗಲಿ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ ಹೇಳಿದರು.
24ರಿಂದ ವಂದೇ ಭಾರತ್ ನಿಲುಗಡೆ? : ಬೆಂಗಳೂರು&ಹುಬ್ಬಳ್ಳಿಗೆ ತುಮಕೂರು ಮೂಲಕ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ತುಮಕೂರಿನಲ್ಲಿ ಈ ರೈಲು ನಿಲುಗಡೆಗೆ ಪ್ರಯಾಣಿಕರಿಂದ ಮನವಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆ.24ರಂದು ಸಂಜೆ 6 ಗಂಟೆಗೆ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ. ಅಂದಿನಿಂದ ಪ್ರತಿನಿತ್ಯ ವಂದೇ ಭಾರತ್ ರೈಲು ತುಮಕೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ ಎಂದು ಸೋಮಣ್ಣ ತಿಳಿಸಿದರು. ರಾಜ್ಯಕ್ಕೆ 3 ಮೆಮೋ ರೈಲು ನೀಡಲಾಗುತ್ತಿದ್ದು, ಈ ಪೈಕಿ ತುಮಕೂರಿಗೂ ಒಂದು ಮೆಮೋ ರೈಲು ಬರಲಿದೆ. ಈ ರೈಲು ಬೆಳಗ್ಗೆ 9.05ಕ್ಕೆ ತುಮಕೂರಿನಿಂದ ಹೊರಟು 10.05ಕ್ಕೆ ಯಶವಂತಪುರ ತಲುಪಲಿದೆ. ಮತ್ತೆ ಸಂಜೆ ತುಮಕೂರಿಗೆ ಆಗಮಿಸಲಿದೆ. ಈ ರೈಲಿನಲ್ಲಿ 5 ಸಾವಿರ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಸಚಿವರು ತಿಳಿಸಿದರು.
ಪರಂ ಸಿಎಂ ಆದರೆ ಸಂತೋಷ : ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದರೆ ಸಂತೋಷ ಪಡುತ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ. ನಾನು ಹೇಳಿದ್ದು ಅವರ ಪಕ್ಷ ನಿರ್ಧಾರ ಮಾಡಿ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಿದರೆ ನಾನು ಸಂತೋಷ ಪಡುತ್ತೀನಿಎಂದಷ್ಟೆ. ಕಾನೂನು ಎಲ್ಲರಿಗೂ ಒಂದೇ. ಕಾನೂನು ತನ್ನದೇ ಆದ ಕೆಲಸವನ್ನು ಮಾಡುತ್ತದೆ ಎಂದು ಸಚಿವ ಸೋಮಣ್ಣ ಹೇಳಿದರು.
ತುಮಕೂರು-: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕಾನೂನಿನಡಿ ಕೆಲಸ ಮಾಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿರುವುದು ಅನುಭವಿ ರಾಜಕಾರಣಿಯ ಕರ್ತವ್ಯ. ಅದನ್ನು ಸಿಎಂ ಸಿದ್ದರಾಮಯ್ಯ ಮಾಡಬೇಕು ಎಂಬುದು ನನ್ನ ಆಗ್ರಹ. ಕಾನೂನು ಚೌಕಟ್ಟಿನಲ್ಲಿ ನಡೆದುಕೊಂಡರೆ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಾಗುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ತಪು$್ಪ ಮಾಡಿರುವುದು ಮೇಲ್ನೋಟಕ್ಕೆ ರಾಜ್ಯಪಾಲರಿಗೆ ಮನವರಿಕೆ ಆಗಿರುವ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ನಿರ್ಧಾರ ಮಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ನುರಿತ ರಾಜಕಾರಣಿ. ಇಂತಹ ಸಂದರ್ಭದಲ್ಲಿ ಅವರ ಪಕ್ಷ ದೃಢ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಜೀನಾಮೆ ಬಗ್ಗೆ ನಾವು ತೀಮಾರ್ನ ಮಾಡಲು ಆಗುವುದಿಲ್ಲ. ಅವರ ಪಕ್ಷ ತೀಮಾರ್ನ ಮಾಡಬೇಕು ಎಂದರು. ಸಿದ್ದರಾಮಯ್ಯ ದುಡುಕೋದು, ಮತ್ತೊಂದು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ 125 ವರ್ಷ ಇತಿಹಾಸ ಇರುವ ಕಾಂಗ್ರೆಸ್, ನಾವು
ಬಿಜೆಪಿಯವರು ಹೇಗೆ ನಡೆದುಕೊಂಡಿದ್ದೀವಿ ಎಂಬುದನ್ನು ಅರ್ಥ ಮಾಡಿಕೊಂಡು ತೀಮಾರ್ನ ಕೈಗೊಂಡರೆ ಮುಂದಿನ ಪೀಳಿಗೆಗೆ ರಾಜಕೀಯದ
ಬಗ್ಗೆ ಗೌರವ ಬರುತ್ತದೆ ಎಂದರು.
ಹಿಂದಿ ಕಲಿಕೆ ಆರಂಭಿಸಿದ ಸೋಮಣ್ಣ: ದೆಹಲಿ ರಾಜಕೀಯದಲ್ಲಿ ಯಶಸ್ವಿಯಾಗಲು ಹಿಂದಿ ಭಾಷೆಯ ಅಧ್ಯಯನಕ್ಕೆ ಸಚಿವ ವಿ.ಸೋಮಣ್ಣ ಮುಂದಾಗಿದ್ದಾರೆ. ತುಮಕೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹಿಂದಿಯ ಕೆಲವು ಪದಗಳನ್ನು ಹೇಳುವ ಮೂಲಕ ಗಮನ ಸೆಳೆದರು. ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ನನಗೆ ಸ್ವಲ್ಪ ತೊಡಕಿದ್ದು, ಹಿಂದಿ ಕಲಿಯಬೇಕು ಎಂಬ ಉದ್ದೇಶದಿಂದ ಪ್ರತಿದಿನ ಬೆಳಗ್ಗೆ 1 ಗಂಟೆ ಹಿಂದಿ ಕಲಿಕೆಗೆ ಮೀಸಲಿಟ್ಟಿದ್ದೇನೆ. ದೆಹಲಿ ನಿವಾಸದಲ್ಲಿ ಹಿಂದಿ ಕಲಿಯಲು ಆರಂಭಿಸಿದ್ದೇನೆ. ಮುಂದಿನ ಆರು ತಿಂಗಳಲ್ಲಿ ಸಂಸತ್ನಲ್ಲಿ ಹಿಂದಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರಮೋದಿ ಅವರ ಮನಸ್ಸು ಗೆಲ್ಲುತ್ತೇನೆ ಎಂದರು. ತುಮಕೂರಿನಲ್ಲಿ ಜಿಲ್ಲಾಮಟ್ಟದ ದಿಶಾ ಸಭೆ ಆ.23ರಂದು ನಡೆಯಲಿದ್ದು, ಈ ಸಭೆಯ ನಡಾವಳಿಗಳು ಪ್ರಧಾನ ಮಂತ್ರಿ ಅಧ್ಯಕ್ಷತೆಯ ನೀತಿ ಆಯೋಗದ ಮುಂದೆ ಹೋಗಲಿದೆ ಎಂದರು. ಮಲೇಷ್ಯಾ ಪ್ರಧಾನಿ ಅವರನ್ನು ಸ್ವಾಗತಿಸಲು ನನಗೆ ನೇಮಕ ಮಾಡಿದ್ದಾರೆ. ನನ್ನ ಬಗ್ಗೆ ತಿಳಿದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾಷಾ ತೊಡಕಿದ್ದರೂ ನನಗೆ ಜವಾಬ್ದಾರಿ ವಹಿಸಿದ್ದಾರೆ ಎಂದು ಹಿಂದಿಯಲ್ಲಿಯೇ ಮಾಹಿತಿ ನೀಡಿದರು.
ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಒತ್ತಾಯ ಬಂದಿವೆ. ಹಾಗೆಯೇ ಕ್ಯಾತಸಂದ್ರ ನಿಲ್ದಾಣಕ್ಕೆ ಸಿದ್ಧಗಂಗಾ ನಿಲ್ದಾಣ ಎಂದು ಹೆಸರಿಡುವಂತೆಯೂ ಪತ್ರಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೂ ತಿಳಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ.
ವಿ.ಸೋಮಣ್ಣ, ಕೇಂದ್ರ ಸಚಿವ