ಕರಾವಳಿ ಜಿಲ್ಲೆಗಳಲ್ಲಿ 2, 3 ಸಾಮಾನ್ಯ ಮಳೆ ಮುನ್ಸೂಚನೆ

rain
Published on

ಮಂಗಳೂರು: ಕರಾವಳಿಯಲ್ಲಿ ಸೋಮವಾರ ಹಲವೆಡೆ ಹಗುರದಿಂದ ಮಳೆಯಾಗಿದೆ. ದ.ಕ. ಜಿಲ್ಲೆಯಾದ್ಯಂತ ಇಡೀ ದಿನ ಬಿಸಿಲು ಸಹಿತ ಅಲ್ಪ ಮಳೆ ಸುರಿದಿದೆ. ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಈಗ ಮತ್ತೆ ಎಲ್ಲೆಡೆ ಮಳೆಯ ವಾತಾವರಣ ಕಂಡುಬಂದಿದೆ.

ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಮವಾರ ನಸುಕಿನ ಜಾವದಿಂದ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ದಿನ ಬಿಸಿಲು ಇತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಸಂಜೆಯವರೆಗೆ ಬಿಡದೆ ಮಳೆ ಸುರಿದಿದೆ. ದ.ಕ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 7.1ಮಿಮಿ ಮಳೆ ದಾಖಲಾಗಿತ್ತು.

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ದಿನದಲ್ಲಿ 2, 3 ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಲಿದೆ. ಈಗಿನಂತೆ ಸೆಪ್ಟೆಂಬರ್ 17ರ ತನಕ ಈ ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯ ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗಾಳಿ ಚಲಿಸುವ ಪಥದ ನಿಖರತೆ ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯದಲ್ಲಿ ಒಂದು ವಾರ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net