

ಕಾರವಾರ: ಬೆಂಗಳೂರು-ಮಂಗಳೂರು ರೈಲನ್ನು ಮುರ್ಡೇಶ್ವರವರೆಗೆ ವಿಸ್ತರಿಸಲಾಗಿದ್ದು, ಸಂಚಾರದ ವೇಳಾ ಪಟ್ಟಿ ಅಸಮರ್ಪಕವಾಗಿದೆ. ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಸಂಚಾರಕ್ಕೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಬೆಂಗಳೂರು-ಮೈಸೂರು-ಮಂಗಳೂರು ರೈಲು(16585/16586) ನ್ನು ವಿಸ್ತರಿಸಲು ಉತ್ತರ ಕನ್ನಡ, ಕುಂದಾಪುರ ರೈಲ್ವೆ ಸಮಿತಿಗಳು ಹೋರಾಟ ನಡೆಸಿದ್ದವು.
ಮೈಸೂರು ಸಂಸದ ಪ್ರತಾಪ ಸಿಂಹ ಬೆಂಬಲದೊಂದಿಗೆ ರೈಲನ್ನು ವಿಸ್ತರಿಸುವಲ್ಲಿ ಹೋರಾಟ ಸಮಿತಿ ಸದಸ್ಯರು ಯಶಸ್ವಿಯಾಗಿದ್ದಾರೆ.
ಭಾನುವಾರ ಮೊದಲ ಬಾರಿಗೆ ಮುರ್ಡೇಶ್ವರಕ್ಕೆ ಬಂದ ರೈಲಿಗೆ ಸ್ಥಳೀಯರು ಪೂಜೆ ಮಾಡಿ, ಮಾಲೆ ಹಾಕಿ ಸ್ವಾಗತ ಮಾಡಿದರು.
ರೈಲು 16585 ಸೆ.16 ರಂದು ರಿಂದ ಶುಕ್ರವಾರ ಹೊರತುಪಡಿಸಿ ಉಳಿದೆಲ್ಲ ದಿನ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 8.15 ಕ್ಕೆ ಹೊರಟು ಮರುದಿನ ಬೆಳಗ್ಗೆ 8.15 ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತಿದೆ.
ನಂತರ 9.20 ಕ್ಕೆ ಮಂಗಳೂರು ಸೆಂಟ್ರಲ್ ಬಿಟ್ಟು 1.20 ಕ್ಕೆ ಮುರ್ಡೇಶ್ವರ ತಲುಪುತ್ತಿದೆ. 1.55 ಕ್ಕೆ ಮುರ್ಡೇಶ್ವರದಿಂದ ವಾಪಸ್ ಮಂಗಳೂರಿಗೆ ಹೊರಡಲಿದೆ. ಇನ್ನೊಂದು ರೈಲು 16586 ಸೆ.17 ರಿಂದ ಗುರುವಾರ ಹೊರತುಪಡಿಸಿ ಇದೇ ವೇಳೆಗೆ ಸಂಚರಿಸಲಿದೆ. ಒಟ್ಟಾರೆ ವಾರದ ಒಂದು ದಿನ ಹೊರತಾಗಿ ಉಳಿದೆಲ್ಲ ದಿನ ಮುರ್ಡೇಶ್ವರದಿಂದ ಮೈಸೂರಿಗೆ ರೈಲ್ವೆ ಸೇವೆ ಸಿಕ್ಕಂತಾಗಿದೆ.
ಈ ರೈಲು ಸಂಚಾರ ಮೂರು ರೈಲ್ವೆ ವಿಭಾಗಗಳಿಗೆ ಸಂಬಂಧಿಸಿದೆ. ನೈರುತ್ಯ ರೈಲ್ವೆಯಿಂದ ಹೊರಡುವ ರೈಲು ಮಂಗಳೂರಿನಲ್ಲಿ ದಕ್ಷಿಣ ರೈಲ್ವೆ ಪ್ರವೇಶಿಸುತ್ತದೆ. ನಂತರ ಕೊಂಕಣ ರೈಲ್ವೆಯಲ್ಲಿ ಸಂಚರಿಸಿ ಕೊನೆಗೊಳ್ಳುತ್ತದೆ. ದಕ್ಷಿಣ ರೈಲ್ವೆ ಅಧಿಕಾರಿ ಹಾಗೂ ಅಲ್ಲಿನ ಕೆಲವು ಹಿತಾಸಕ್ತಿಗಳಿಗೆ ಈ ರೈಲು ವಿಸ್ತರಣೆಗೊಳ್ಳುವುದು ಇಷ್ಟವಿರಲಿಲ್ಲ ಎಂಬುದು ರೈಲ್ವೆ ಹೋರಾಟಗಾರರ ಆರೋಪ. ಇದರಿಂದ ದಕ್ಷಿಣ ರೈಲ್ವೆ ಅನಗತ್ಯ ವಿಳಂಬ ಮಾಡುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಬೆಳಗ್ಗೆ 8.15 ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪುವ ರೈಲು 20 ಕಿಮೀ ದೂರದ ಸುರತ್ಕಲ್ ನಿಲ್ದಾಣಕ್ಕೆ ಬರಲು ಎರಡುಕಾಲು ತಾಸು ಬೇಕಾಗುತ್ತದೆ. ಇಷ್ಟೇ ನಿಲುಗಡೆ ಇರುವ ಮತ್ಸ್ಯ ಗಂಧ ರೈಲು 91 ಕಿಮೀ ದೂರದ ಕುಂದಾಪುರವನ್ನು 2 ತಾಸಿನಲ್ಲಿ ಕ್ರಮಿಸುತ್ತದೆ. ದಕ್ಷಿಣ ರೈಲ್ವೆಯು ಬೆಂಗಳೂರು- ಮಂಗಳೂರು ರೈಲನ್ನು ನೈರುತ್ಯ ರೈಲ್ವೆಯಿಂದ ಈ ಮೊದಲಿನ ವೇಳಾಪಟ್ಟಿಗಿಂತ ಸುಮಾರು 10 ನಿಮಿಷ ಮೊದಲೇ ಪಡೆಯುತ್ತದೆ. ಆದರೆ, ಅನಗತ್ಯವಾಗಿ ನಿಲ್ದಾಣಗಳಲ್ಲಿ ನಿಲ್ಲಿಸಿ ಸುಮಾರು 40 ನಿಮಿಷ ವಿಳಂಬವಾಗಿ ಕೊಂಕಣ ರೈಲ್ವೆಗೆ ಹಸ್ತಾಂತರಿಸುತ್ತದೆ.
ಇದನ್ನೂ ಓದಿ:ಚೈತ್ರಾ ಕುಂದಾಪುರ ವಂಚನೆ ಕೇಸಿಗೆ; ಮೈಸೂರು ವಕೀಲ ಪ್ರಮುಖ ಸಾಕ್ಷಿಧಾರ
ಅನಗತ್ಯ ವಿಳಂಬವನ್ನು ತಪ್ಪಿಸಿದಲ್ಲಿ ರೈಲನ್ನು ಮುರ್ಡೇಶ್ವರ ಬದಲು ಕುಮಟಾ ಅಥವಾ ಗೋಕರ್ಣದವರೆಗೆ ವಿಸ್ತರಿಸಬಹುದು. ಇದರಿಂದ ಬೆಂಗಳೂರು-ಮೈಸೂರು ಭಾಗದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಉತ್ತರ ಕನ್ನಡದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಅನುಕೂಲವಾಗುತ್ತದೆ. ಎಂಬುದು ರೈಲ್ವೆ ಹೋರಾಟ ಸಮಿತಿಯ ದೂರು. ದಕ್ಷಿಣ ರೈಲ್ವೆ ಈ ನಡುವೆ ರೈಲಿನ ನೀರು ತುಂಬಿ ಕಳಿಸುವ ಕೆಲಸವನ್ನೂ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಓಡುವ ರೈಲುಗಳ ಬಗ್ಗೆ ತಾತ್ಸಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಬಂದಾಗಿದ್ದ ಮೈಸೂರು-ಉತ್ತರ ಕನ್ನಡ ರೈಲ್ವೆ ಸಂಪರ್ಕವನ್ನು ಮರಳಿ ಸ್ಥಾಪಿಸಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ಅಂತಿಮವಾಗಿ ಬೆಂಗಳೂರು ರೈಲು ಮಂಗಳೂರಿನಿಂದ ಮುರ್ಡೇಶ್ವರವರೆಗೆ ವಿಸ್ತರಣೆಗೊಂಡಿದೆ. ಮೊದಲ ದಿನವೇ ಎಲ್ಲ ಟಿಕೆಟ್‌ಗಳು ಬುಕ್ ಆಗಿರುವುದನ್ನೂ ಗಮನಿಸಬಹುದು. ಇದನ್ನು ಕಾರವಾರವರೆಗೂ ವಿಸ್ತರಿಸುವ ಒತ್ತಾಯವೂ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇವೆ.ರಾಜೀವ ಗಾಂವಕರ್ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ
ಬೆಂಗಳೂರು ರೈಲು ಮುರ್ಡೇಶ್ವರದವರೆಗೆ ಮಾತ್ರ ಬಂದರೆ ಉತ್ತರ ಕನ್ನಡಕ್ಕೆ ಪ್ರಯೋಜನವಾಗದು. ಅದನ್ನು ಕಾರವಾರಕ್ಕೆ ವಿಸ್ತರಿಸುವ ಬಗ್ಗೆ ಮಾತನಾಡುತ್ತೇನೆ.ಸತೀಶ ಸೈಲ್ಕೋಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸದಸ್ಯ.....