ಕಬಡ್ಡಿ ಆಡುವಾಗ ಹೃದಯಾಘಾತ: ಸ್ನೇಹಿತರ ಎದುರಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡ ಯುವಕ!

Heart Attack
Published on

ನವದೆಹಲಿ: ಕರ್ನಾಟಕದಲ್ಲಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಆಂಧ್ರ ಪ್ರದೇಶದ ಬಾಲಾಜಿ ಕಾಲೇಜ್​ ಆಫ್​ ಫಾರ್ಮಸಿ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿ ಹೃದಯಾಘಾತದಿಂದ ಮಂಗಳವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೃತ ವಿದ್ಯಾರ್ಥಿಯನ್ನು ತನುಜ್​​​ ಕುಮಾರ್​ ನಾಯಕ್​ (19) ಎಂದು ಗುರುತಿಸಲಾಗಿದೆ. ಈತ ಆಂಧ್ರದ ಸತ್ಯ ಸಾಯಿ ಜಿಲ್ಲೆಯ ಮಡಕಸಿರಾ ಗ್ರಾಮದ ನಿವಾಸಿ. ಇತ್ತೀಚೆಗಷ್ಟೇ ಕಾಲೇಜಿಗೆ ಸೇರಿಕೊಂಡಿದ್ದ. ಕಬಡ್ಡಿ ಕೋರ್ಟ್​ನಲ್ಲಿ ಎದುರಾಳಿ ತಂಡದ ಸದಸ್ಯರೊಬ್ಬರು ರೈಡ್​ಗೆ ಬಂದಿದ ವೇಳೆ ತನುಜ್​, ಇತರ ಐದು ಜನರೊಂದಿಗೆ ನಿಂತಿದ್ದರು. ಈ ವೇಳೆ ಹೃದಯಾಘಾತವಾಗಿದೆ. ಇಡೀ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತನುಜ್​ ಮತ್ತು ತಂಡದ ಇತರೆ ಆಟಗಾರರು ರೈಡ್​ಗೆ ಬಂದಿದ್ದ ಎದುರಾಳಿ ಆಟಗಾರನನ್ನು ಸರೆಹಿಡಿಯಲು ಪಯತ್ನಿಸುವಾಗ ಹಿಂದೆ ನಿಂತಿದ್ದ ತನುಜ್, ಇದ್ದಕ್ಕಿದ್ದಂತೆ​ ಹಾಗೇ ಹಿಂದಕ್ಕೆ ಕುಸಿದು ಬಿದ್ದರು. ತಕ್ಷಣ ತನುಜ್​ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ವೆಂಟಿಲೇಟರ್​ ನೆರವಿನಿಂದ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ತನುಜ್​ ಕೊನೆಯುಸಿರೆಳೆದಿದ್ದಾನೆ.

ತನುಜ್​ ಯಾವುದೇ ಕೋವಿಡ್​ 19 ಲಸಿಕೆ ಪಡೆದಿರಲಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಗೆ ತನುಜ್​ ಸಹೋದರ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಎರಡು ದಿನಗಳವರೆಗೆ ತನುಜ್​, ಕೋಮಾಗೆ ಜಾರಿದ್ದ. ಆದರೆ, ಮಂಗಳವಾರ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ. ಈತನ ಚಿಕಿತ್ಸೆಗಾಗಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪೋಷಕರಿಗೆ ಆರ್ಥಿಕ ನೆರವು ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net