೧೮೭ ಗೃಹ ರಕ್ಷಕರು ಕರ್ತವ್ಯ ನಿರ್ವಹಣೆ

gruharakshaka
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ೫೦೦ ಗೃಹರಕ್ಷಕರನ್ನು ನಿಯೋಜಿಸಿಕೊಳ್ಳಲು ಅವಕಾಶ ಇತ್ತು. ಆದರೆ ಯಾರೂ ಸಹ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಮುಂದೆ ಬರದಿರುವ ಹಿನ್ನೆಲೆ ೩೦೦ ಗೃಹರಕ್ಷಕರ ನೇಮಕದಲ್ಲಿ ೧೮೭ ಜನ ಮಾತ್ರ ಗೃಹರಕ್ಷಕದಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರರಾಜ್ ತಿಳಿಸಿದರು.

ಜಿಲ್ಲಾ ಗೃಹ ರಕ್ಷಕದಳ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಸೋಮವಾರ ನಡೆದ ಗೃಹ ರಕ್ಷಕದಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೇರೆ ಬೇರೆ ಜಿಲ್ಲೆಗಳಲ್ಲಿ ಗೃಹರಕ್ಷಕದಳದಲ್ಲಿ ಕರ್ತವ್ಯ ನಿರ್ವಹಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಾರೆ. ಆ ನಿಟ್ಟಿನಲ್ಲಿ ವೃತ್ತಿಯನ್ನು ಗೌರವಿಸಿ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಮಾಡಿದರು.

ಗೃಹರಕ್ಷಕ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುವ ದಿನಕ್ಕೆ ೫೦೦ ರೂ. ನೀಡಲಾಗುತ್ತದೆ. ಗೃಹರಕ್ಷಕರು ಪೊಲೀಸರಂತೆ ಕರ್ತವ್ಯ ನಿರ್ವಹಿಸುವುದನ್ನು ಕಾಣುತ್ತೇವೆ. ಇತ್ತೀಚಿನ ದಿನಗಳಲ್ಲಿ ಪದವಿ ಪಡೆದವರು ಸಹ ಗೃಹರಕ್ಷಕದಳ ಹುದ್ದೆಗೆ ಬರುತ್ತಾರೆ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ, ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಗೃಹರಕ್ಷಕರು ಹಬ್ಬ ಹರಿದಿನಗಳು, ಜಾತ್ರೆಗಳು, ವಿಶೇಷ ಸಂದರ್ಭಗಳಲ್ಲಿ ಹಾಗೂ ವಿವಿಧ ಇಲಾಖೆಗಳ ಜೊತೆ ನಿಕಟ ಸಂಪರ್ಕ ಹೊಂದಿ ಕರ್ತವ್ಯ ನಿರ್ವಹಿಸುತ್ತಾರೆ. ಗೃಹರಕ್ಷಕರಲ್ಲಿ ಶಿಸ್ತು, ಸಮಯಪ್ರಜ್ಞೆ ಕಾಣಬಹುದು. ಆ ಹಿನ್ನೆಲೆಯಲ್ಲಿ ಸಮಾಜ ಗೃಹರಕ್ಷಕರನ್ನು ಗುರುತಿಸುತ್ತದೆ. ಕೊಡಗು ಜಿಲ್ಲೆಯಲ್ಲಿ ಗೃಹರಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಗೃಹರಕ್ಷಕರು ಸಮಾಜದ ಒಳಿತಿಗಾಗಿ ಕೆಲಸ ನಿರ್ವಹಿಸುತ್ತಾರೆ. ಆ ನಿಟ್ಟಿನಲ್ಲಿ ತಮ್ಮಗಳ ಆರೋಗ್ಯವನ್ನು ನೋಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಗೃಹರಕ್ಷಕರು ಪೊಲೀಸರ ಜೊತೆ ಕರ್ತವ್ಯ ನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಾರೆ, ಇದೊಂದು ರೀತಿ ಪರೋಪಕಾರದ ಕೆಲಸವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷದಲ್ಲಿ ಗೃಹರಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ೧೦ ಗೃಹರಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೆಯೇ ಮುಂಬಡ್ತಿ ಹೊಂದಿದ ೮ ಮಂದಿ ಗೃಹರಕ್ಷಕರು ಮತ್ತು ನಿವೃತ್ತರಾದ ಗೃಹರಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪೊಲೀಸ್ ಇನ್ಸ್‌ಪೆಕ್ಟರ್ ರವಿ, ಗೃಹರಕ್ಷಕದಳ ವಿಭಾಗದ ವಿಶ್ವನಾಥ, ಕವನ್ ಕುಮಾರ್, ಪುಟ್ಟರಾಜು, ತ್ಯಾಗರಾಜು, ಲೋಕೇಶ್ ಇತರರು ಇದ್ದರು. ಪ್ರಕೃತಿ ಮತ್ತು ತಂಡದವರು ಪ್ರಾರ್ಥಿಸಿದರು. ಗೃಹರಕ್ಷಕರಾದ ಮದಬ್ ಬೈರಗಿ ಸ್ವಾಗತಿಸಿದರೆ, ಲವಿ ಕೆ.ಎಫ್.ಅವರು ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಗೃಹರಕ್ಷಕದಳದ ಪಿಎಸ್‌ಐ ಅಕ್ಷಯ್ ಕುಮಾರ್ ಅವರು ಗೌರವ ವಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net