

ಚೆನ್ನೈ: 2023ನೇ ಸಾಲಿನ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್)ನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವಿನ ಪಂದ್ಯದಲ್ಲಿ ಹುಬ್ಬೇರಿಸುವ ದಾಖಲೆಯೊಂದು ಸೃಷ್ಟಿಯಾಗಿದೆ. ಸೇಲಂ ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವಾರ್ ಇನ್ನಿಂಗ್ಸ್ನ ಕೊನೆಯ 20ನೇ ಓವರ್‌ನ ಅಂತಿಮ ಎಸೆತದಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ತಂಡಕ್ಕೆ 18 ರನ್ ಬಿಟ್ಟುಕೊಡುವ ಮೂಲಕ ಕಳಪೆ ಸಾಧನೆಗೆ ಗುರಿಯಾಗಿದ್ದಾರೆ.
2022ನೇ ಸಾಲಿನ ಟಿಎನ್ಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಹೊಂದಿರುವ ತನ್ವಾರ್, 2023ನೇ ಸಾಲಿನ ಟೂರ್ನಿಯಲ್ಲಿ ಸೂಪರ್ ಗಿಲ್ಲಿಸ್ ತಂಡದ ಎದುರು ಕೊನೆಯ ಎಸೆತ ಎಸೆಯಲು ಪರದಾಡಿದರು. ಇದರ ಪರಿಣಾಮ ಒಂದು ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿದರು. ಈ ಮೂಲಕ ಸೂಪರ್ ಗಿಲ್ಲೀಸ್ ತಂಡ ಕೊನೆಯ ಓವರ್ನಲ್ಲಿ 26 ರನ್ಗಳೊಂದಿಗೆ 5 ವಿಕೆಟ್ ನಷ್ಟಕ್ಕೆ 217 ರನ್ಗಳ ಬೃಹತ್ ಗುರಿಯನ್ನು ಕಲೆಹಾಕಿದರು.
19.5 ಓವರ್ನಲ್ಲಿ ತನ್ವಾರ್ ಎಸೆದ ಕೊನೆಯ ಬಾಲ್ನಲ್ಲಿ ವಿಕೆಟ್ ಬಿದ್ದಿತ್ತು. ಆದರೆ, ಅದು ನೋಬಾಲ್ ಆಯಿತು. ನಂತರ ಫ್ರೀ ಹಿಟ್ ಬಾಲ್ನಲ್ಲಿ ಎದುರಾಳಿ ತಂಡದ ಬ್ಯಾಟರ್ ಸಿಕ್ಸರ್ ಬಾರಿಸಿದರು. ಆದರೆ, ಅದು ಕೂಡ ನೋಬಾಲ್ ಆಯಿತು. ಅಲ್ಲಿಗೆ ಗಿಲ್ಲೀಸ್ ತಂಡಕ್ಕೆ 8 ರನ್ ಸಿಕ್ಕಿತು ಮತ್ತು ಒಂದು ಎಸೆತ ಹಾಗೇ ಬಾಕಿ ಉಳಿದಿತ್ತು. ಆನಂತರ ಎಸೆದ ಎಸೆತವು ಸಹ ನೋ ಬಾಲ್ ಆಯಿತು ಮತ್ತು ಬ್ಯಾಟರ್ಗಳು ಎರಡು ರನ್ ಗಳಿಸಿದರು. ಅಲ್ಲಿಗೆ ತಂಡದ ಮೊತ್ತ 11 ರನ್ ಆಯಿತು. ನಂತರ ಎಸೆದ ಚೆಂಡು ವೈಡ್ ಆಯಿತು. ಮತ್ತೊಂದು ರನ್ ಉಚಿತ ಸೇರ್ಪಡೆಯಾಗಿ 12 ರನ್ ಆಯಿತು. ಅಂತಿಮವಾಗಿ ಎಸೆದ ಎಸೆತ ಸರಿಯಾಗಿತ್ತು. ಆದರೆ, ಬ್ಯಾಟರ್ ಆ ಚೆಂಡನ್ನು ಗಾಳಿಯಲ್ಲಿ ಬೌಂಡರಿ ಗೆರೆ ದಾಟಿಸಿದರು. ಅಲ್ಲಿಗೆ ಒಂದು ಎಸೆತದಲ್ಲಿ ಒಟ್ಟು 18 ರನ್ ಬಂದಂತಾಯಿತು.
ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಎಸೆತ ಎಂಬ ಹೆಸರಿಗೆ ಭಾಜನವಾಗಿದೆ. ಈ ಬಗ್ಗೆ ಮಾತನಾಡಿರುವ ತನ್ವಾರ್, ಕೊನೆಯ ಓವರ್‌ನ ಹೊಣೆಯನ್ನು ನಾನೇ ಹೊರಬೇಕಾಗಿದೆ. ಹಿರಿಯ ಬೌಲರ್ ಆಗಿ, ನಾಲ್ಕು ನೋ-ಬಾಲ್ ಎಸೆದಿದ್ದು ನಿರಾಶಾದಾಯಕವಾಯಿತು. ಇಲ್ಲಿ ಗಾಳಿಯು ದೊಡ್ಡ ಪಾತ್ರವನ್ನು ವಹಿಸಿತು ಎಂದು ಪಂದ್ಯದ ನಂತರ ಹೇಳಿದರು.
ಪಂದ್ಯದ ಫಲಿತಾಂಶ ವಿಚಾರಕ್ಕೆ ಬಂದರೆ, ಗಿಲ್ಲೀಸ್ ತಂಡ ನೀಡಿದ್ದ 217 ರನ್ ಗುರಿ ಬೆನ್ನತ್ತಿದ ಸ್ಪಾರ್ಟನ್ಸ್ ತಂಡ 9 ವಿಕೆಟ್ಗೆ 165 ರನ್ ಗಳಿಸಿ, 52 ರನ್ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು. (ಏಜೆನ್ಸೀಸ್)