ಕಲಾಪಕ್ಕೆ ಅಡ್ಡಿಪಡಿಸಿದ ಬಿಜೆಪಿಯ 18 ಶಾಸಕರು 6 ತಿಂಗಳು ಅಮಾನತು; ಸ್ಪೀಕರ್​ ಆದೇಶ | Suspended

dk - 2025-03-21T180407.385
Published on

Suspended : ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಅಮಾನತು ಮಾಡಿ ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್ ಅವರು ಆದೇಶ ಹೊರಡಿಸಿದ್ದಾರೆ. ಸ್ಪೀಕರ್‌ ಪೀಠಕ್ಕೆ ಅವಮಾನ ತೋರಿದ ಕಾರಣಕ್ಕೆ ಬಿಜೆಪಿ ನಾಯಕರ ಮೇಲೆ ಈ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹನಿಟ್ರ್ಯಾಪ್ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ಬಿಜೆಪಿ ಶಾಸಕರು ಸ್ಪೀಕರ್ ಪೀಠದ ಬಳಿ ಜಮಾಯಿಸಿದರು. ಅವರು ಕುಳಿತ್ತಿದ್ದ ವೇದಿಕೆ ಮೇಲೆ ಹತ್ತಿ ಸ್ಪೀಕರ್ ಯು.ಟಿ ಖಾದರ್ ಅವರ ಮೇಲೆ ಕಾಗದಪತ್ರಗಳನ್ನು ಹರಿದು ಎಸೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಭಾರೀ ಗದ್ದಲದ ವಾತಾವರಣ ಸೃಷ್ಠಿಯಾಯ್ತು. ಸ್ಪೀಕರ್ ಕುರ್ಚಿಯನ್ನು ಬಿಜೆಪಿ ಶಾಸಕರು ಸುತ್ತುವರಿದರು. ಕೂಡಲೇ ಸ್ಥಳಕ್ಕೆ ಬಂದ ಮಾರ್ಷಲ್‌ಗಳು ಬಲವಂತವಾಗಿ ಶಾಸಕರನ್ನು ಹೊರಹಾಕಿದರು.

ರಾಜ್ಯದ ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಮೇಲಿನ ಚರ್ಚೆ ಬಿರುಗಾಳಿ ಎಬ್ಬಿದೆ. ಸಚಿವರು ಹಾಗೂ ಶಾಸಕರ ಮೇಲೆ ಹನಿಟ್ರ್ಯಾಪ್‌ಗೆ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪ ಇಂದು ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ಇದೇ ವಿಚಾರಕ್ಕೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಹೈಡ್ರಾಮವೇ ನಡೆಯಿತು. ಈ ವೇಳೆ ವಿರೋಧ ಪಕ್ಷದ ನಾಯಕರು ಅಧ್ಯಕ್ಷರ ಪೀಠ ಸುತ್ತುವರಿದು ಪೆಪರ್​ಗಳನ್ನು ಎಸೆದರು. ಈ ಹಿನ್ನೆಲೆ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಕಾಲ ಅಮಾನತು ಮಾಡಲಾಗಿದೆ.

ಬಿಜೆಪಿಯ ಯಾವ ಶಾಸಕರು ಸಸ್ಪೆಂಡ್

ಮುನಿರತ್ನ, ಬಿ ಸುರೇಶ್ ಗೌಡ, ದೊಡ್ಡಣ್ಣ ಗೌಡ ಪಾಟೀಲ್, ಸಿ ಕೆ ರಾಮಮೂರ್ತಿ, ಅಶ್ವತ್ಥ ನಾರಾಯಣ, ಎಸ್.ಆರ್ ವಿಶ್ವನಾಥ್, ಉಮನಾಥ್ ಕೋಟ್ಯಾನ್, ಬೈರತಿ ಬಸವರಾಜ, ಎಂ.ಆರ್ ಪಾಟೀಲ್, ಚನ್ನಬಸಪ್ಪ, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಯಶಪಾಲ್ ಸುವರ್ಣ, ಹರೀಶ್ ಬಿಪಿ, ಡಾ. ಭರತ್ ಶೆಟ್ಟಿ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ ಚಂದ್ರು ಲಮಾಣಿ ಅಮಾನತುಗೊಂಡಿರುವ ಸದಸ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net