ಸ್ನೇಹಿತನ ಸಾರೀ ಡಾನ್ಸ್ ವಿಡಿಯೋ : ತಾರಕಕ್ಕೇರಿದ ವಾಗ್ವಾದ ಕೊಲೆಯಲ್ಲಿ ಅಂತ್ಯ

MURDER
Published on

ಮುಂಬೈ: ಇಲ್ಲಿಯ ಧಾರವಿ ಸಮೀಪ ಬುಧವಾರ ಸ್ನೇಹಿತರ ಮಧ್ಯೆ ನಡೆದ ವಾಗ್ವಾದದ ವೇಳೆ 17 ವರ್ಷದ ಯುವಕನನ್ನು ಆತನ ಸ್ನೇಹಿತರು ಹತ್ಯೆ ಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ಬಾಲಕರು ಸೇರಿ ನಾಲ್ವರು ಶಂಕಿತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಮೃತನನ್ನು ಧಾರವಿಯ ಸುಭಾಷ್ ನಗರ ನಿವಾಸಿ ಕೌಶಿಕ್ ಸುನಿಲ್ ನಾರಾಯಣ್ ಕಾರ್ (17) ಎಂದು ಗುರುತಿಸಲಾಗಿದೆ. ಆರೋಪಿಗಳು ಸಹ ಅದೇ ಪ್ರದೇಶದ ನಿವಾಸಿಗಳು ಮತ್ತು ಕೌಶಿಕ್​​ನ ಸ್ನೇಹಿತರಾಗಿದ್ದರು.

ಕೊಲೆಗೀಡಾದ ಯುವಕ ಸೀರೆ ಧರಿಸಿ ಡಾನ್ಸ್ ಮಾಡುತ್ತಿದ್ದಾಗ ಆತನ ಸ್ನೇಹಿತರು ವಿಡಿಯೋ ಮಾಡಿದ ನಂತರ ಅವರ ಮಧ್ಯೆ ವಾಗ್ವಾದ ನಡೆದಿತ್ತು. ವೀಡಿಯೊವನ್ನು ಅಳಿಸಲು ಕೌಶಿಕ್ ಒತ್ತಾಯಿಸಿದ್ದ ಮತ್ತು ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರುವ ತನ್ನ ಚಿಕ್ಕಪ್ಪನಿಗೆ ಅಥವಾ ಪೊಲೀಸರಿಗೆ ತಿಳಿಸುತ್ತೇನೆ ಎಂದೂ ಹೇಳಿದ್ದ.

ಶಂಕಿತರು ವಿಡಿಯೋ ಅಳಿಸಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಧಾರವಿ ಪೊಲೀಸ್ ಠಾಣೆಯ ಹಿರಿಯ ಇನ್​​ಸ್ಪೆಕ್ಟರ್ ರಮೇಶ್ ನಂಗಾರೆ ಹೇಳಿದ್ದಾರೆ.

ತನ್ನ ಸ್ನೇಹಿತರು ಕಿರುಕುಳ ನೀಡುತ್ತಿರುವ ಕುರಿತು ತಿಳಿಸಲು ಆ ಯುವಕ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಾನೆ. ಚಿಕ್ಕಪ್ಪ ಮನೆಯಲ್ಲಿಲ್ಲದ ಕಾರಣ ಮರಳಿ ಬಂದಿದ್ದಾನೆ.

ಅವನು ಹಿಂತಿರುಗುತ್ತಿರುವಾಗ ನಾಲ್ವರು ಆರೋಪಿಗಳು ಅವನನ್ನು ದಾರಿಯಲ್ಲಿ ಅಡ್ಡಗಟ್ಟಿ ವಾಗ್ವಾದಕ್ಕಿಳಿದಿದ್ದಾರೆ. ಅವರಲ್ಲಿ ಒಬ್ಬಾತ ಚಾಕುವಿನಿಂದ ಕೌಶಿಕ್​​ಗೆ ಎರಡು ಬಾರಿ ಇರಿದ. ಭುಜಕ್ಕೆ ಗಂಭೀರ ಗಾಯಗಳಾಗಿದ್ದ ಆತನನ್ನು ಸಿಯಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಧಿಕ ರಕ್ತಸ್ರಾವದಿಂದಾಗಿ ಆತ ಸಾವನ್ನಪ್ಪಿದ್ದಾನೆ. ನಂತರ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ.

ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ಡೊಂಗ್ರಿ ರಿಮಾಂಡ್ ಹೋಮ್​​ಗೆ ಕಳುಹಿಸಲಿದ್ದು, ನಾಲ್ಕನೇ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net