

ಗುಜರಾತ್: ಭಾನುವಾರ (ನ.26) ಸುರಿದ ಭಾರೀ ಮಳೆಗೆ 14 ಜನರು ಮೃತಪಟ್ಟಿದ್ದು, ಬೆಳಗ್ಗೆಯಿಂದ ಸುರಿದ ವ್ಯಾಪಕ ಮಳೆಗೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಗುಜರಾತ್ನಲ್ಲಿ ವರದಿಯಾಗಿದೆ. ರಾಜ್ಯದ 251 ತಾಲೂಕುಗಳ ಪೈಕಿ 220 ತಾಲೂಕುಗಳಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಗಳಲ್ಲಿ 50 ಮಿ.ಮೀ.ವರೆಗೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಸೌರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಭಾರೀ ಆಲಿಕಲ್ಲು ಮಳೆ ವರದಿಯಾಗಿದ್ದು, ದೃಷ್ಟಿಗೋಚರವಾಗಿ ಪ್ರದೇಶಗಳು ಹಿಮದಿಂದ ಆವೃತವಾದ ಭೂದೃಶ್ಯದಂತೆ ಕಂಡುಬಂದಿವೆ. ಹಲವೆಡೆ ಬಿರುಗಾಳಿ ಸಹಿತ ಬಲವಾದ ಗಾಳಿ ಬೀಸಿದ್ದು, ಮರ ಧರೆಗುರುಳಿದ ಘಟನೆಗಳು ಸಂಭವಿಸಿವೆ. ಸಿಡಿಲು ಬಡಿದು ದಾಹೋಡ್‌ನಲ್ಲಿ ಮೂವರು ಮೃತಪಟ್ಟರೆ, ಭರೂಚ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸೂರತ್, ದ್ವಾರಕಾ, ಪಂಚಮಹಲ್, ಸುರೇಂದ್ರನಗರ, ಅಮ್ರೇಲಿ, ಖೇಡಾ, ಅಹಮದಾಬಾದ್ ಗ್ರಾಮಾಂತರ, ಸಬರ್ಕಾಂತ ಮತ್ತು ಬೋಟಾಡ್‌ನಲ್ಲಿ ತಲಾ ಒಬ್ಬರು ಮರಣ ಹೊಂದಿದ್ದಾರೆ.
ವಿವಿಧ ಸಿಡಿಲು ಘಟನೆಗಳಲ್ಲಿ ಕನಿಷ್ಠ 40 ಪ್ರಾಣಿಗಳು ಸಾವನ್ನಪ್ಪಿವೆ. ರಾಜ್‌ಕೋಟ್‌ನಲ್ಲಿ ಮಳೆಯಿಂದಾಗಿ ಖಂಡೇರಿ ಕ್ರಿಕೆಟ್ ಸ್ಟೇಡಿಯಂಗೆ ತೀವ್ರ ಹಾನಿಯಾಗಿದೆ. ಮೂಲಗಳ ಪ್ರಕಾರ, ಅಂದಾಜು 1.5 ರಿಂದ 2 ಕೋಟಿ ರೂ. ಸೌರಾಷ್ಟ್ರದ ಮೊರ್ಬಿಯಲ್ಲಿ ಸೆರಾಮಿಕ್ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಮಳೆಯಿಂದಾಗಿ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ-ಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಅಧಿಕಾರಿಗಳನ್ನು ಹೈ ಅಲರ್ಟ್ ಮಾಡಿದೆ.
ಪ್ರಸ್ತುತ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೃಷಿ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ರೈತರಿಗೆ ಆಗಿರುವ ನಷ್ಟದ ಕುರಿತು ಚರ್ಚಿಸಿ, ಬೆಳೆ ನಷ್ಟದ ಸಮೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಿಗೆ ಹೊಂದಿಕೊಂಡಿರುವ ಚಂಡಮಾರುತದ ಪರಿಚಲನೆಯು ಅಕಾಲಿಕ ಮಳೆಗೆ ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ,(ಏಜೆನ್ಸೀಸ್).