ಇಲಿ ಪಾಷಾಣ, 136 ನಿದ್ರೆ ಮಾತ್ರೆ ಸೇವಿಸಿ ಕೈ ಕುಯ್ದುಕೊಂಡ್ರೂ ಸಾಯಲಿಲ್ಲ! ಮೋಹಿನಿ ಬಾಳಲ್ಲಿ ನಡೆದಿತ್ತಂತೆ ಪವಾಡ

Actress Mohini
Published on

ಚೆನ್ನೈ: ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ಶ್ರೀರಾಮಚಂದ್ರ ಸಿನಿಮಾ ಬಗ್ಗೆ ಕೇಳಿದರೆ ಮೊದಲು ನೆನಪಾಗುವುದೇ “ಸುಂದರಿ ಸುಂದರಿ ಸುರ ಸುಂದರಿ” ಹಾಡು. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ವಿಭಿನ್ನವಾಗಿ ಹಾಡಿದ ಈ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತದೆ. ಈ ಹಾಡಲ್ಲಿ ರವಿಚಂದ್ರನ್​ ಜತೆ ಹೆಜ್ಜೆ ಹಾಕಿದ ನಟಿ ಮೋಹಿನಿ ಅವರು ಕನ್ನಡಿಗರಿಗೂ ಚಿರಪರಿಚಿತ.

ಶ್ರೀರಾಮಚಂದ್ರ ಮಾತ್ರವಲ್ಲ, ಕಲ್ಯಾಣ ಮಂಟಪ, ಜ್ವಾಲಾ, ಸಿಡಿದೆದ್ದ ಪಾಂಡವರು, ರೌಡಿ, ಲಾಲಿ ಮತ್ತು ನಿಶ್ಯಬ್ದ ಸೇರಿದಂತೆ ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ಕೂಡ ತಮ್ಮ ನಟನೆಯ ಮೂಲಕ ಮೋಹಿನಿ ಅವರು ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಚೆನ್ನೈನಲ್ಲಿ ಜನಿಸಿದ ಮೋಹಿನಿ 90ರ ದಶಕದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷ ನಟಿ ಎನಿಸಿಕೊಂಡರು.

ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ 1999ರಲ್ಲಿ ಭರತ್​ ಎಂಬುವರನ್ನು ವರಿಸಿದ ಮೋಹಿನಿ, ಕಾಲಾನಂತರದಲ್ಲಿ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು. 2011ರಲ್ಲಿ ಕೊನೆಯದಾಗಿ ಕಲೆಕ್ಟರ್​ ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸಿ, ಸಿನಿಮಾದಿಂದ ಅಂತರ ಕಾಯ್ದುಕೊಂಡರು. ಮೋಹಿನಿ ಅವರು 1999ರಲ್ಲಿ ಭರತ್ ಎಂಬುವರನ್ನು ವಿವಾಹವಾದರು ಮತ್ತು ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ನೆಲೆಸಿದ್ದಾರೆ. ದಂಪತಿಗೆ ಅನಿರುದ್ಧ್ ಮತ್ತು ಅದ್ವೈತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮೋಹಿನಿ 2006ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ತಿಳಿದುಬಂದಿದೆ. ಮತಾಂತರಗೊಂಡ ತಮ್ಮ ಕತೆಯನ್ನು ಗಲಾಟಾ ಪಿಂಕ್ ಯೂಟ್ಯೂಬ್ ಚಾನೆಲ್‌ನೊಂದಿಗೆ ಇದೀಗ ಹಂಚಿಕೊಂಡಿದ್ದು, ಭಾರಿ ವೈರಲ್​ ಆಗಿದೆ.

ಮೋಹಿನಿ ಹೇಳಿದ್ದೇನು?

ಜೀವನದ ಕೆಲವು ಹಂತದಲ್ಲಿ ನಾವೇಕೆ ಬದುಕಬೇಕು ಎಂಬ ಆಲೋಚನೆ ಬರುತ್ತದೆ. ನನಗೂ ಇದೇ ರೀತಿಯ ಆಲೋಚನೆ ಬಂದಾಗ ನಾನು ಸ್ವಲ್ಪಮಟ್ಟಿಗೆ ಖಿನ್ನತೆಗೆ ಒಳಗಾಗಲು ಪ್ರಾರಂಭಿಸಿದೆ. ಕೆಟ್ಟ ಕನಸುಗಳು ಬೀಳಲಾರಂಭಿಸಿದವು. ಇದಾದ ನಂತರ ನಾನು ಒಬ್ಬ ಜ್ಯೋತಿಷಿಯನ್ನು ಭೇಟಿಯಾದೆ. ನನ್ನ ಜೀವನದಲ್ಲಿ ಇದೆಲ್ಲ ಇದ್ದಕ್ಕಿದ್ದಂತೆ ಏಕೆ ನಡೆಯುತ್ತಿದೆ ಎಂದು ಕೇಳಿದೆ. ಆಗ ಯಾರೋ ಬರೆದ ಕರಾರು ಪತ್ರವಿದು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ಇದರಿಂದ ನನ್ನ ನಿದ್ರೆ ಇನ್ನಷ್ಟು ಕೆಡಲು ಪ್ರಾರಂಭಿಸಿತು. ಅನಾರೋಗ್ಯ ಕಾಡಲು ಪ್ರಾರಂಭಿಸಿತು. ದೈಹಿಕ ಆರೋಗ್ಯವೇ ಇಲ್ಲದಂತಾಯಿತು. ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಎಲ್ಲವೂ ಸರಿಯಾಗಿದೆ ಎಂದು ತೋರುತ್ತಿತ್ತು. ಆದರೆ, ನನಗೆ ಆರೋಗ್ಯ ಕೆಟ್ಟಿರುವಂತೆ ಭಾಸವಾಗುತ್ತಿತ್ತು.

ಮದುವೆಯ ನಂತರವೇ ನನಗೆ ಹೀಗಾಗಲು ಪ್ರಾರಂಭಿಸಿದೆ ಮತ್ತು ನಾನು ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಗಂಡನಿಗೆ ಹೇಳಿದೆ. ಆದರೆ, ವಿದ್ಯಾವಂತರಾಗಿದ್ದ ನನ್ನ ಗಂಡ ಯಾವುದನ್ನು ಮನಸ್ಸಿಗೆ ಹಾಕಿಕೊಳ್ಳದೆ ನನ್ನನ್ನು ಸಮಾಧಾನ ಮಾಡಿದರು. ಇದಾದ ಬಳಿಕ ನಾನು ಓರ್ವ ಶಿವಾಚಾರ್ಯರನ್ನು ಭೇಟಿಯಾದೆ. ನನ್ನೊಳಗೆ ನಡೆಯುತ್ತಿರುವುದೆಲ್ಲ ನಿಜವೇ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು ಒಳ್ಳೆಯದು ಇರಬೇಕಾದರೆ ಕೆಟ್ಟದ್ದೂ ಇರಬೇಕಲ್ಲವೇ ಎಂದರು.

ಇದಾದ ನಂತರ ನಾನು ಸಂಶೋಧಿಸಲು ಪ್ರಾರಂಭಿಸಿದೆ. ಜ್ಯೋತಿಷ್ಯ, ಜಾತಕ, ಕಾಲ, ಕರ್ಮ ಎಲ್ಲವನ್ನೂ ಮೀರಿದ ದೇವರು ಯಾರು ಎಂದು ಹುಡುಕತೊಡಗಿದೆ. ಆಗ ಯೇಸು ಕ್ರಿಸ್ತನು ನನ್ನ ಕನಸಿನಲ್ಲಿ ಬಂದನು. ನನ್ನ ಕನಸಿನಲ್ಲಿ ಜೀಸಸ್ ಕ್ರೈಸ್ಟ್ ಬಂದಾಗಲೆಲ್ಲ ನಾನು ಸ್ವಾತಂತ್ರ್ಯವನ್ನು ಪಡೆಯಲಾರಂಭಿಸಿದೆ. ಕೆಟ್ಟ ಕನಸುಗಳು ಕರಗಿ ಹೋದವು. ನನ್ನ ಆರೋಗ್ಯ ಸುಧಾರಿಸಲು ಪ್ರಾರಂಭಿಸಿತು. ಆತ್ಮಹತ್ಯೆ ಆಲೋಚನೆ ನಿಂತಿತು ಮತ್ತು ಮನಸ್ಸಿಗೆ ದೊಡ್ಡ ಸಮಾಧಾನ ಬರತೊಡಗಿತು.

ಯೇಸು ಕ್ರಿಸ್ತನು ನನ್ನ ಜೀವನದಲ್ಲಿ ಅನೇಕ ಬಾರಿ ನನ್ನನ್ನು ರಕ್ಷಿಸಿದ್ದಾನೆ. ಅಂತಹ ಕೆಟ್ಟ ಕನಸುಗಳು ಇದ್ದಕ್ಕಿದ್ದಂತೆ ಬಂದಾಗ, ನನ್ನ ಆತ್ಮಹತ್ಯೆ ಆಲೋಚನೆಗಳು ಮೇಲುಗೈ ಸಾಧಿಸುತ್ತವೆ. ಒಮ್ಮೆ ನನ್ನ ಕೈಯನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದೆ. ಆ ಸಮಯದಲ್ಲಿ ನನ್ನ ಮಗ ಹತ್ತಿರ ಮಲಗಿದ್ದ. ಬಳಿಕ ಒಂದು ದೊಡ್ಡ ಬಟ್ಟೆಯನ್ನು ತೆಗೆದುಕೊಂಡು ಕೈಗೆ ಸುತ್ತಿಕೊಂಡು ನಿದ್ದೆಗೆ ಜಾರಿದೆ. ಬೆಳಗ್ಗೆ ಎದ್ದಾಗ ಸ್ವಲ್ಪ ರಕ್ತ ಮಾತ್ರ ಹೊರಬಂದಿತ್ತು. ಅದೇ ರೀತಿ ಇನ್ನೊಂದು ಸಲ ಕೋಕ್​ಗೆ ಇಲಿ ಪಾಷಾಣ ಬೆರೆಸಿ ಕುಡಿದಿದ್ದೆ. ದೇಹಕ್ಕೆ ಏನಾದ್ರೂ ಆಗುತ್ತೆ ಅಂತ ನಾನೂ ಕಾಯ್ತಾ ಇದ್ದೆ. ಆದರೆ ನನಗೆ ಏನೂ ಆಗಲಿಲ್ಲ. ಇನ್ನೊಂದು ಬಾರಿ ನಾನು ಸುಮಾರು 136 ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡೆ. ಆಗಲೂ ಏನು ಆಗಲಿಲ್ಲ ಎಂದು ಮೋಹಿನಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net