

ಬೆಂಗಳೂರು: 13352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋಟ್ ಗ್ರೀನ್ ಸಿಗ್ನಲ್ ನೀಡಿದೆ.
ಮುಖ್ಯ ನ್ಯಾಯಾಧಿಶರಾದ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿ ಮಾ.೮, ೨೦೨೩ ರ ಆಯ್ಕೆ ಪಟ್ಟಿಯಂತೆ ೧೩,೩೫೨ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಸೂಚಿಸಿದೆ.
೬ ರಿಂದ ೮ ನೇ ತರಗತಿಗಳಿಗೆ ಶಿಕ್ಷಕರ ಕೊರತೆ ಇರುವುದನ್ನು ಪರಿಗಣಿಸಿ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಈ ಹಿಂದೆ ನೇಮಕಾತಿ ಮರುರೂಪಿಸಲು ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿದೆ. ಮಾರ್ಚ್ ೮, ೨೦೨೩ ರ ಆಯ್ಕೆಪಟ್ಟಿಯಂತೆ ನೇಮಕಾತಿ ಅಂತಿಮಗೊಳಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮಗೊಳಿಸಲು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶದವರೆಗೆ ಮುಂದೂಡುವಂತೆ ಸೂಚಿಸಿದೆ. ನೊಂದ ಅಭ್ಯರ್ಥಿಗಳು ಕೆಎಸ್‌ಎಟಿಯಲ್ಲಿ ದಾವೆ ಹೂಡಬಹುದು. ಆ ದಾವೆ ಇತ್ಯರ್ಥವಾಗುವವರೆಗೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡುವಂತೆ ಸೂಚನೆ ನೀಡಿದೆ.
ಮೊದಲ ಅಯ್ಕೆಪಟ್ಟಿಯಲ್ಲಿದ್ದ ೪೫೧ ಅಭ್ಯರ್ಥಿಗಳನ್ನು ಜೂನ್ ೮ ೨೦೨೩ ರ ಆಯ್ಕೆಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿತ್ತು . ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಅನ್ವಯಿಸಿ ರೂಪಿಸಿದ ಹೊಸ ನಿಯಮದಡಿ ೪೫೧ ಅಭ್ಯರ್ಥಿಗಳನ್ನು ಬದಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಹೀಗೆ ನೇಮಕದಿಂದ ಹೊರಗುಳಿದ ೪೫೧ ಅಭ್ಯರ್ಥಿಗಳ ಭವಿಷ್ಯ ಕೆಎಸ್‌ಎಟಿ ಆದೇಶದ ಬಳಿಕ ನಿರ್ಧಾರವಾಗಲಿದೆ.
ಏನಿದು ವಿವಾದ?
ಹಿಂದುಳಿದ ವರ್ಗದ ವಿವಾಹಿತ ಮಹಿಳೆಯನ್ನು ಆಯ್ಕೆಗೆ ಪರಿಗಣಿಸುವಾಗ ಪತಿಯ ಆದಾಯ ಪರಿಗಣನೆಗೆ ಸರ್ಕಾರ ನಿಯಮ ರೂಪಿಸಿತ್ತು. ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಆಧರಿಸಲು ಸೂಚಿಸಿತ್ತು. ಇದೀಗ ಏಕಸದಸ್ಯ ಪೀಠದ ಈ ಆದೇಶ ರದ್ದುಪಡಿಸಿದ ಹೈಕೋರ್ಟ್, ೧೩,೩೫೨ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.