ಮುಂಡಗೋಡ: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿ ಹನ್ನೆರಡಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ ಘಟನೆ ತಾಲೂಕಿನ ಲಕ್ಕೋಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.
ಪಟ್ಟಣದಿಂದ ತಾಲೂಕಿನ ಲಕ್ಕೋಳ್ಳಿ ಗ್ರಾಮದ ಮೂಲಕ ಅಂದಲಗಿಯತ್ತ ತೆರಳುತ್ತಿದ್ದ ಟಾಟಾಏಸ್ ವಾಹನ ಲಕ್ಕೋಳ್ಳಿ ಬಸ್ ನಿಲ್ದಾಣದ ಬಳಿ ನಿಂತಿದೆ. ಅಲ್ಲಿಯೇ ಸನಿಹದಲ್ಲಿದ್ದ ನೀರಿನ ಟ್ಯಾಂಕ್ಗೆ ಮೂರು ವರ್ಷಗಳ ಹಿಂದೆಯೆ ಗೂಡು ಕಟ್ಟಿಕೊಂಡಿದ್ದ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿವೆ. ಇದರಿಂದ ಟಾಟಾ ಏಸ್ ವಾಹನದಲ್ಲಿದ್ದ ಮೂವರು ವಿದ್ಯಾರ್ಥಿಗಳು ಹಾಗೂ ವಾಹನದಲ್ಲಿದ್ದ ನಾಲ್ವರು ದೊಡ್ಡವರ ಮೇಲೆ ಹೆಜೇನುಗಳು ದಾಳಿ ನಡೆಸಿವೆ. ಬಸ್ ನಿಲ್ದಾಣ ಬಳಿಯ ಕಿರಾಣಿ ಅಂಗಡಿಗೆ ಬಂದಿದ್ದ ಮತ್ತೆ ಮೂವರು ವಿದ್ಯಾರ್ಥಿಗಳು ಹಾಗೂ ಅಂಗಡಿ ಬಳಿ ನಿಂತಿದ್ದ ಸಾರ್ವಜನಿಕರಿಗೆ ಹೆಜ್ಜೇನು ದಾಳಿ ನಡೆಸಿದ್ದ ಹನ್ನೆರಡಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆಜ್ಜೇನು ದಾಳಿಯಿಂದ ತೀವ್ರ ಅಸ್ವಸ್ಥಗೊಂಡಿರುವ ಮಕ್ಕಳನ್ನು ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿದೆ.