ಆಂಧ್ರದಲ್ಲಿ ಕಾಲ್ತುಳಿತಕ್ಕೆ 12 ಭಕ್ತರ ಸಾವು! ಪರಿಹಾರ ಘೋಷಿಸಿದ ಕೇಂದ್ರ, ದುರಂತ ಹೇಗಾಯ್ತು? ಇಲ್ಲಿದೆ ಕಂಪ್ಲೀಟ್​ ಮಾಹಿತಿ | Stampede

Bbau - 2025-11-01T155344.379
Published on

ಆಂಧ್ರಪ್ರದೇಶ: ಆಂಧ್ರಪ್ರದೇಶದ ಶ್ರೀಕಾಕುಳಂನ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ(Stampede) ಮಕ್ಕಳು ಸೇರಿ 12 ಭಕ್ತರು ಮೃತಪಟ್ಟಿದ್ದಾರೆ.

ಕಾಲ್ತುಳಿತಕ್ಕೆ ಕಾರಣವೇನು?

ಸರ್ಕಾರದ ಮೂಲಗಳ ಪ್ರಕಾರ, '' 80 ವರ್ಷದ ಮುಕುಂದ ಪಾಂಡ ಎಂಬುವವರು ತಮ್ಮ ಜಮೀನಲ್ಲಿ ಇತ್ತೀಚಿಗೆ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ನಾಲ್ಕು ತಿಂಗಳ ಹಿಂದೆ ನಿರ್ಮಾಣವಾದ ಈ ದೇವಸ್ಥಾನ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಮಾದರಿಯಲ್ಲೇ ಮಾಡಲಾಗಿದೆ.ಹೀಗಾಗಿ ಈ ದೇವಸ್ಥಾನಕ್ಕೆ'ಮಿನಿ ತಿರುಪತಿ' ಎಂದು ಹೆಸರಿಸಲಾಗಿದೆ.

ಏಕಾದಶಿಯ ಸಂದರ್ಭದ ಹಿನ್ನೆಲೆ ಸಾವಿರಾರು ಭಕ್ತರು ಆಗಮಿಸಿದ್ದರು. ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಈ ದೇವಸ್ಥಾನದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಸಾಮಾನ್ಯವಾದ ಒಂದು ದ್ವಾರವಿದ್ದು, ಕಿರಿದಾದ ಹಾದಿಯ ಪಕ್ಕದಲ್ಲಿ ಕೈಗಂಬಿಗಳಿವೆ. ಏಕಾದಶಿ ಪೂಜೆಗಾಗಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದೇ ದುರಂತಕ್ಕೆ ಕಾರಣ. ಅಲ್ಲದೆ, "ಈ ದೇವಾಲಯದ ಸಾಮರ್ಥ್ಯ ಕೇವಲ 2,000 ರಿಂದ 3,000 ಜನರಿಗೆ ಮಾತ್ರ. ಇಂದು ಏಕಾದಶಿಯಾಗಿದ್ದರಿಂದ, 25,000 ಜನರು ಏಕಕಾಲದಲ್ಲಿ ಆಗಮಿಸಿದರು. ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಮಾಡಲಾಗಿಲ್ಲ, ಅಥವಾ ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸಲಾಗಿಲ್ಲ. ಅಪಘಾತಕ್ಕೆ ಇದೇ ಕಾರಣ" ಎಂದು ಸರ್ಕಾರ ಹೇಳಿದೆ.

PM ಕೇರ್​ನಿಂದ 2 ಲಕ್ಷ ರೂ. ಪರಿಹಾರ

"ತಮ್ಮ ಆತ್ಮೀಯರನ್ನು ಕಳೆದುಕೊಂಡವರೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಕಂಬನಿ ಮೀಡಿದಿದ್ದಾರೆ. ಮೃತರ ಕುಟುಂಬಸ್ಥರಿಗೆ PMNRF ನಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು" ಎಂದು ಪ್ರಧಾನಿ ಕಚೇರಿ ತಿಳಿಸಿದೆ.

CM ಚಂದ್ರಬಾಬು ನಾಯ್ಡು ಭಾವುಕ

ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತ ಘಟನೆ ಆಘಾತವನ್ನುಂಟು ಮಾಡಿದೆ. ಈ ದುರಂತ ಘಟನೆಯಲ್ಲಿ ಭಕ್ತರ ಸಾವು ಅತ್ಯಂತ ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ತ್ವರಿತ ಮತ್ತು ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net