

ಶ್ರೀನಗರ : ಭಾರತದ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರರವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರೂ ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಈ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿರುವ ಪ್ರವಾಸಿಗರ ಸಂಖ್ಯೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲಿದೆ.
2024ನೇ ವರ್ಷ ಅರ್ಧದಷ್ಟು ಪೂರೈಸಿಲ್ಲ. ಈಗಾಗಲೇ ಜಮ್ಮು ಮತ್ತು ಕಾಶ್ಮೀರಕ್ಕೆ 12.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. 2024 ವರ್ಷವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ ಎಂದು ಸ್ಥಳೀಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಈವರೆಗೆ ಕಾಶ್ಮೀರಕ್ಕೆ ಗರಿಷ್ಠ ಪ್ರಮಾಣದ ಪ್ರವಾಸಿಗರು ಭೇಟಿ ನೀಡಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.
ಜೂನ್ ಆರಂಭಕ್ಕೂ ಮುನ್ನವೇ ಪ್ರವಾಸಿಗರಿಂದ ಈಗಾಗಲೇ ನಗರದಲ್ಲಿನ ಎಲ್ಲಾ ಸ್ಥಳೀಯ ಹೋಟೆಲ್ಗಳು, ಗುಲ್ಮಾರ್ಗ್ ಸ್ಕೀ ರೆಸಾರ್ಟ್, ಪಹಲ್ಗಾಮ್ ಮತ್ತು ಸೋನಾಮಾರ್ಗ್ನಲ್ಲಿನ ಹೋಟೆಲ್ಗಳು ಭರ್ತಿಯಾಗಿವೆ. ಕಾಶ್ಮೀರದ ಪ್ರಸಿದ್ಧ ದಾಲ್ ಮತ್ತು ನೈಜೀನ್ ಸರೋವರಗಳಲ್ಲಿನ ಬೋಟ್ ಹೌಸ್, ಅತಿಥಿ ಗೃಹಗಳು, ಹೋಮ್ಸ್ಟೇಗಳಿಗೆ ಭಾರೀ ಬೇಡಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು ಕಾಶ್ಮೀರದಲ್ಲಿ ಶಾಂತಿ ಕಾಪಾಡಿರುವುದರಿಂದ ವಿದೇಶಿ ಪ್ರವಾಸಿಗರು ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದು ಈ ವರ್ಷ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜಕಾರಿಯಾಗಿದೆ. ವಿದೇಶಿ ಪ್ರವಾಸಿಗರ ಆಗಮನದಿಂದ ಹೆಚ್ಚು ಆದಾಯ ಪಡೆಯುತ್ತೇವೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಅಮರನಾಥಯಾತ್ರೆ ಆರಂಭಕ್ಕೂ ಮುನ್ನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾಶ್ಮೀರದ ಹಿಮಾಲಯ ಮಾರ್ಗವಾಗಿ ಅಮರನಾಥ ಯಾತ್ರೆ ನಡೆಯುವುದರಿಂದ ಪ್ರವಾಸಿಗರ ಭೇಟಿ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಆದರೆ ಈ ಬಾರಿ ಅದನ್ನೂ ಮೀರಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ಅಮರನಾಥ ಯಾತ್ರೆ ಜೂನ್ 29ರಿಂದ ಆರಂಭಗೊಳ್ಳಲಿದ್ದು, 52 ದಿನಗಳ ಕಾಲ ಪ್ರವಾಸಿಗರ ದರ್ಶನಕ್ಕೆ ತೆರೆಯಲಾಗುವುದು. ಆಗಸ್ಟ್ 19ರಂದು ಕೊನೆಗೊಳ್ಳಲಿದೆ.(-ಏಜೆನ್ಸೀಸ್)