More

  ಅಮೇರಿಕಾದ ಮೇರಿಲ್ಯಾಂಡ್​ನಲ್ಲಿ 11ನೇ ವಸಂತ ಸಾಹಿತ್ಯೋತ್ಸವ: ಮೇ 17-19, 2024

  ಅಮೇರಿಕಾದ ಮೇರಿಲ್ಯಾಂಡ್​ನಲ್ಲಿ 11ನೇ ವಸಂತ ಸಾಹಿತ್ಯೋತ್ಸವ: ಮೇ 17-19, 2024| ವರದಿ: ರಂಜಿನಿ ಬಾಣವರ, ಮೇರಿಲ್ಯಾಂಡ್

  ಅಮೇರಿಕಾದಲ್ಲಿ ಕನ್ನಡ ಸಾಹಿತ್ಯ ರಂಗ ಮತ್ತು ಶರಾವತಿ ಕನ್ನಡ ಬಳಗ ಮೇರಿಲ್ಯಾಂಡ್ ಜಂಟಿಯಾಗಿ ಇದೇ ಮೇ 17, 18, ಮತ್ತು 19ರಂದು ಮೂರು ದಿನಗಳ ಕಾಲ 11ನೇ ವಸಂತ ಸಾಹಿತ್ಯೋತ್ಸವವನ್ನು ಆಯೋಜಿಸಿದ್ದಾರೆ.

  ಅಮೇರಿಕಾದಲ್ಲಿ ನೆಲೆಸಿರುವ ಎಲ್ಲ ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವುದು ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವುದು ಈ ವಸಂತ ಸಾಹಿತ್ಯೋತ್ಸವದ ಮೂಲ ಉದ್ದೇಶವಾಗಿದೆ. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಲೇಖಕಿ ಮತ್ತು ಸ್ತ್ರೀವಾದಿ ಚಿಂತಕಿ ಎಚ್.ಎಸ್. ಶ್ರೀಮತಿಯವರು ಪಾಲ್ಗೊಳ್ಳಲಿದ್ದಾರೆ. ಇವರೊಡನೆ ಡಾ. ಕೆ.ವಿ. ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿಯವರು ಭಾಗಿಯಾಗಲಿದ್ದಾರೆ. ಕರ್ನಾಟಕದ ಪ್ರಸಿದ್ಧ ರಂಗಕರ್ಮಿ, ಚಲನಚಿತ್ರ ನಿರ್ದೇಶಕರಾದ ನಾಗಾಭರಣ ಹಾಗೂ ಅವರ ಧರ್ಮಪತ್ನಿ ನಾಗಿಣಿ ಭರಣ ಮತ್ತು ಖ್ಯಾತ ರಂಗ ಕಲಾವಿದ ಶ್ರೀ ಬಾಬು ಹಿರಣ್ಣಯ್ಯ ಭಾಗವಹಿಸಲಿದ್ದಾರೆ . ಪ್ರಸಿದ್ಧ ಹಿನ್ನಲೆ ಗಾಯಕರಾದ ಸಾಧ್ವಿನಿ ಕೊಪ್ಪ ಹಾಗೂ ಸಚಿನ್ ಭಾರದ್ವಾಜರವರು ತಮ್ಮ ಸುಮಧುರ ಗಾಯನದಿಂದ ಪ್ರೇಕ್ಶಕರನ್ನು ರಂಜಿಸಲಿದ್ದಾರೆ. ಈ ಸಾಹಿತ್ಯೋತ್ಸವದಲ್ಲಿ ಬೆಂಕಿ ಬಸಣ್ಣನವರ “ನಗೆ ಬೆಳಕು” ಎಂಬ ವಿಭಿನ್ನ ವಿಶಿಷ್ಟವಾದ ಹಾಸ್ಯ ಕಾರ್ಯಕ್ರಮವಿದೆ.

  ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪುಸ್ತಕ ಸಂತೆ, ಈ ವರ್ಷದ ವಿಷಯವಾದ ಸ್ತ್ರೀ ಸಂವೇದನೆ ಬಗ್ಗೆ ಸಂವಾದ, ಪುಸ್ತಕ ಬಿಡುಗಡೆ, ಶರಾವತಿ ಬಳಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ಮ್ಯಾಂಡೊಲಿನ್ ವಾದನ , ಪದ್ಯ ವಾಚನಗಳನ್ನು ಆಯೋಜಿಸಲಾಗಿದೆ. ಇದಲ್ಲದೆ ನೆರೆ ರಾಜ್ಯದ ಕನ್ನಡಿಗರ ನೃತ್ಯ, ನಾಟಕ ಮತ್ತು ಹಾಸ್ಯ ಪ್ರಹಸನಗಳು ಎಲ್ಲರ ಮನರಂಜಿಸಲಿವೆ.

  ವಸಂತ ಸಾಹಿತ್ಯೋತ್ಸವದ ಪ್ರಯುಕ್ತ ವಿಶೇಷ ಸ್ಮರಣ ಸಂಚಿಕೆ ‘ವಾಸಂತಿ’ ಬಿಡುಗಡೆಯಾಗಲಿದೆ. ಇದರಲ್ಲಿ ಅತಿಥಿಗಳ ಕಿರು ಪರಿಚಯ, ಕಾರ್ಯಕ್ರಮದ ವೇಳಾಪಟ್ಟಿ, ವಿವಿಧ ಲೇಖನಗಳು, ಕವಿತೆಗಳು ಹಾಗೂ ಚಿತ್ರಕಲೆಗಳು ಅಚ್ಚಾಗಿವೆ. ಉತ್ಸವವೆಂದರೆ ಭರ್ಜರಿ ಭೋಜನ ಇರಲೇಬೇಕು! ಅದಕ್ಕೆಂದೇ ಬಗೆ ಬಗೆಯ ಭಕ್ಷ ಭೋಜ್ಯಗಳು ತಯಾರಾಗಲಿವೆ, ಕರ್ನಾಟಕ ಶೈಲಿಯ ಖಾದ್ಯಗಳಾದ ರಾಗಿ ಮುದ್ದೆ, ಬಸ್ಸಾರು, ಬಿಳಿ ಹೋಳಿಗೆ, ಎಣ್ಣೆಗಾಯಿ, ಚಿತ್ರಾನ್ನ, ಬಿಸಿಬೇಳೆಬಾತ್, ಪುಳಿಯೋಗರೆ, ಮಜ್ಜಿಗೆ ಹುಳಿ, ಕೋಸಂಬರಿ ಅಲ್ಲದೆ ಬಾಯಲ್ಲಿ ನೀರೂರಿಸುವ ಮೈಸೂರ್ ಪಾಕ್, ಹೋಳಿಗೆ, ಲಾಡು, ಬಜ್ಜಿ, ಪಕೋಡ, ಉದ್ದಿನ ವಡೆ ಮುಂತಾದವುಗಳನ್ನು ಅತಿಥಿಗಳಿಗೆ ಉಣಬಡಿಸಲಿದ್ದೇವೆ.

  ಅಮೇರಿಕಾದ ಕನ್ನಡ ಸಾಹಿತ್ಯ ರಂಗದ ಬಗ್ಗೆ ವಿವರ :
  ಇದು 2003ರಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು. ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಎಚ್.ವೈ. ರಾಜಗೋಪಾಲ್ ಅವರು ನೇಮಕಗೊಂಡರು. ಅಂದಿನಿಂದ ಇಂದಿನವರೆಗೂ ಪ್ರತಿ ಎರಡು ವರ್ಷಗಳಿಗೊಮ್ಮೆ ಸಮ್ಮೇಳನಗಳನ್ನು ನಡೆಸುತ್ತಾ, ಆರಿಸಿಕೊಂಡ ಒಂದು ವಿಶಿಷ್ಟ ವಸ್ತುವಿನ ಮೇಲೆ ಅಮೇರಿ ಕನ್ನಡಿಗರ ಲೇಖನಗಳನ್ನೊಳಗೊಂಡ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿರುವುದು “ಕನ್ನಡ ಸಾಹಿತ್ಯ ರಂಗ”ದ ಹೆಮ್ಮೆಯ ಸಾಧನೆ!

  ಶರಾವತಿ ಕನ್ನಡ ಬಳಗದ ಬಗ್ಗೆ ವಿವರ:
  ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಕಲೆ ಮತ್ತು ಭಾಷೆಯ ಬಾಯಾರಿಕೆ ತಣಿಸುವ ಅನುಗುಣವಾಗಿ ವೇದಿಕೆಯನ್ನು ಒದಗಿಸುವುದು, ಕನ್ನಡಿಗರ ಜೊತೆ ಬೆರೆಯಲು, ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪರಿಚಯಿಸಿ ಉತ್ತೇಜಿಸುವುದು ಮತ್ತು ಕನ್ನಡವನ್ನು ಬೆಳಸುವ ಸದುದ್ದೇಶವನ್ನು ಹಾಗೂ ಪರಮೋತ್ಸಾಹವನ್ನು ಹೊಂದಿದ್ದ ಅಮೇರಿಕದ ಮೇರಿಲ್ಯಾಂಡಿನ ಕನ್ನಡ ಪ್ರೇಮಿಗಳ ತಂಡವೊಂದು 2018ರ ಫೆಬ್ರವರಿಯಲ್ಲಿ ‘ಶರಾವತಿ ಕನ್ನಡ ಬಳಗ’ವನ್ನು ಹುಟ್ಟು ಹಾಕಿದರು. ಈ ಆರು ವರ್ಷಗಳ ಅವಧಿಯಲ್ಲಿ ‘ಶರಾವತಿ ಕನ್ನಡ ಬಳಗ’ದ ವತಿಯಿಂದ ಅನೇಕ ಸಾಂಸ್ಕೃತಿಕ ಹಾಗೂ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿವರ್ಷವೂ ಸಂಕ್ರಾಂತಿಯಿಂದ ಆರಂಭವಾಗಿ ಯುಗಾದಿ, ಪ್ರವಾಸ, ಗಣೇಶೋತ್ಸವವನ್ನು ಆಚರಿಸಿ ದೀಪೋತ್ಸವದೊಂದಿಗೆ ಮುಕ್ತಾಯಗೊಳ್ಳುತ್ತದೆ. ಆಸಕ್ತ ಕಲಾವಿದರಿಂದ ನೃತ್ಯ, ಹಾಡು ಹಾಗೂ ನಾಟಕಗಳನ್ನು ಪ್ರದರ್ಶಿಸಲಾಗುವುದು. ಇದಷ್ಟೇ ಅಲ್ಲದೆ, ವರ್ಷಕ್ಕೊಮ್ಮೆ ಕರ್ನಾಟಕದಿಂದ ಖ್ಯಾತ ಕಲಾವಿದರನ್ನು ಕರೆಯಿಸಿ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದುವರೆಗೂ ಅರ್ಜುನ್ ಜನ್ಯ, ಚಂದನ್ ಶೆಟ್ಟಿ ಹಾಗೂ ಗುರುಕಿರಣ್ ಅವರು ತಮ್ಮ ತಂಡದೊಂದಿಗೆ ಆಗಮಿಸಿ ನಮ್ಮನ್ನು ರಂಜಿಸಿದ್ದಾರೆ.

  ಈ ವಸಂತ ಸಾಹಿತ್ಯೋತ್ಸವದಲ್ಲಿ ರಿಜಿಸ್ಟರ್ ಮಾಡಿಸಲು ಕೆಳಗಿನ ವೆಬ್​ಸೈಟ್​ಗೆ ಭೇಟಿ ಕೊಡಿ : https://www.sharavationline.org/events/11-sahityostava/

  11ನೇ ವಸಂತ ಸಾಹಿತ್ಯೋತ್ಸವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts