

ಜೋಧಪುರ: ರಾಜಸ್ಥಾನದ ಜೋಧಪುರಕ್ಕೆ ಬಂದು ನೆಲೆಸಿದ್ದ ಪಾಕಿಸ್ತಾನದ 11 ನಿರಾಶ್ರಿತರ ಮೃತದೇಹ ಇಂದು ಪತ್ತೆಯಾಗಿದೆ.
ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು 2012ರಲ್ಲಿಯೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಜೋಧಪುರದ ಹಳ್ಳಿಗೆ ಬಂದು ನೆಲೆಸಿದ್ದರು.
ಇವರೆಲ್ಲರ ಶವಗಳೂ ಕೋಣೆಯೊಂದರಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಇವರು ಮೃತಪಟ್ಟ ಪ್ರದೇಶದ ಸುತ್ತಮುತ್ತ ಕೀಟನಾಶಕದ ವಾಸನೆ ಇದೆ. ಬಹುಶಃ ಯಾವುದಾದರೂ ವಿಷಾನಿಲ ಸೋರಿಕೆಯಾಗಿ, ಉಸಿರುಕಟ್ಟಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ದೆಚು ಠಾಣೆ ವ್ಯಾಪ್ತಿಯ ಲೊಡ್ತಾ ಏರಿಯಾದಲ್ಲಿ ಘಟನೆ ನಡೆದಿದೆ. ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಠಾಣಾಧಿಕಾರಿ ಹನುಮಾನ್ ರಾಮ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೆಲ್ಲರೂ ಪಾಕಿಸ್ತಾನದಲ್ಲಿ ತೀವ್ರ ಹಿಂಸೆ ಅನುಭವಿಸಿದ ನಂತರ ಭಾರತಕ್ಕೆ ಬಂದು ನೆಲೆಸಿದ್ದರು. ಅಚಲ್ವಾಟಾ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿದ್ದರು. ಸದ್ಯ ಕುಟುಂಬದ ಓರ್ವ ಸದಸ್ಯ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇರ್ ಸೆಂಟರ್ ಆಗಿರುವ ಹೋಟೆಲ್ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 10ಕ್ಕೇರಿಕೆ
ಹಾಗೇ ಈ ಘಟನೆ ಬಗ್ಗೆ ಸ್ಥಳೀಯರು ಬೇರೆಯದೇ ಹೇಳುತ್ತಿದ್ದಾರೆ. ಈ ಕುಟುಂಬಲ್ಲಿ ನರ್ಸ್ ಓರ್ವರಿದ್ದಾರೆ. ಅವರು ಸಹೋದರರಿಗೆ ರಾಖಿ ಕಟ್ಟಲು ಇಲ್ಲಿಗೆ ಆಗಮಿಸಿದ್ದರು. ನಂತರ ಇಲ್ಲೇ ಉಳಿದುಕೊಂಡಿದ್ದರು. ನಿನ್ನೆ ಉಳಿದ 10 ಜನರಿಗೆ ವಿಷ ತುಂಬಿದ ಇಂಜೆಕ್ಷೆನ್ ಕೊಟ್ಟು ಕೊಂದ ಬಳಿಕ, ತಾವೂ ಅದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣ ಸ್ವಲ್ಪ ಜಟಿಲವಾಗಿದ್ದು, ತನಿಖೆ ಶುರುಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)