

ಬೆಂಗಳೂರು: ಜೂ.29ರಂದು ನಡೆದಿದ್ದ ಸುಬ್ರಮಣಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ 9 ಆರೋಪಿಗಳ ಪೈಕಿ ಮೂವರಿಗೆ ಕರೊನಾ ಸೋಂಕು ದೃಢವಾಗಿದೆ. ಆರೋಪಿಗಳನ್ನು ಬಂಧಿಸಿದ್ದ ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಆರೋಪಿಗಳ ಸಂಪರ್ಕದಲ್ಲಿದ್ದ ಪೊಲೀಸರನ್ನು ಹೋಂ ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ ಕಲಾಸಿಪಾಳ್ಯ, ಚಾಮರಾಜಪೇಟೆ, ಜೆ.ಜೆ.ನಗರ, ಕಾಮಾಕ್ಷಿಪಾಳ್ಯ, ಕೆ.ಪಿ. ಅಗ್ರಹಾರ, ಕೆಂಗೇರಿ, ಅನ್ನ ಪೂರ್ಣೆಶ್ವರಿನಗರ ಠಾಣೆಗಳನ್ನು ಮುಚ್ಚಲಾಗಿದೆ.
ಮಧ್ಯಾಹ್ನ ಸೀಲ್ಡೌನ್, ರಾತ್ರಿ ಕರ್ತವ್ಯ: ಸೋಂಕು ದೃಢವಾದ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆಯನ್ನು ಗುರುವಾರ ಮಧ್ಯಾಹ್ನ ಸೀಲ್ಡೌನ್ ಮಾಡಲಾಗಿತ್ತು. ಆದರೆ, ದ್ವಿತೀಯ ಸಂಪರ್ಕವಿದ್ದ ಪೊಲೀಸರನ್ನು ಠಾಣೆಗೆ ಬಂದು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಭಯದಲ್ಲಿಯೇ ರಾತ್ರಿ ಕರ್ತವ್ಯ ನಿರ್ವಹಿಸಿದರು.