

ನಾಶಿಕ್: ಶಿರಡಿ ಸಾಯಿಬಾಬ ಭಕ್ತರಿದ್ದ ಖಾಸಗಿ ಐಷಾರಾಮಿ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 10 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಪಥರ್ಡೆ ಸಮೀಪ ಶುಕ್ರವಾರ ನಡೆದಿದೆ.
ಅಪಘಾತವು ಬೆಳಗಿನ ಜಾವ 7 ಗಂಟೆ ಸಮಯದಲ್ಲಿ ಸಂಭವಿಸಿದೆ. ಲಕ್ಷುರಿ ಬಸ್ ಥಾಣೆಯ ಅಂಬರ್ನಾಥ್ನಿಂದ ಅಹ್ಮದ್ನಗರದ ಶಿರಡಿಗೆ ತೆರಳುತ್ತಿತ್ತು. ಪಥರ್ಡೆ ಸಮೀಪ ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ದುರ್ಘಟನೆ ನಡೆದಿದೆ. ಸ್ಥಳದಲ್ಲೇ 10 ಮಂದಿ ಮೃತಪಟ್ಟರೆ, ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಮೃತಪಟ್ಟವರಲ್ಲಿ 6 ಮಂದಿ ಮಹಿಳೆಯರು, ಓರ್ವ ಪುರುಷ ಹಾಗೂ ಉಳಿದವರು ಮಕ್ಕಳೆಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸಿನ್ನಾರ್ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಪುಣೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದುರಂತದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ತನಿಖೆಗೆ ಶಿಂಧೆ ಆದೇಶಿಸಿದ್ದಾರೆ. (ಏಜೆನ್ಸೀಸ್)