ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಅಧಿಕಾರಿಗಳಿಂದ ಪುಷ್ಪ ನಮನ

Published on

ಹನೂರು: ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಧೈರ್ಯ ಸಾಹಸ ಮೆರೆದು ವೀರ ಮರಣ ಹೊಂದಿದ್ದ ಹುತಾತ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಮರಣಾರ್ಥವಾಗಿ ಮಿಣ್ಯಂ ಸಮೀಪದ ಬೂದಿಕೆರೆ ರಸ್ತೆ ತಿರುವಿನಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಗುರುವಾರ ಪೊಲೀಸರು ಅಧಿಕಾರಿಗಳು, ಸಿಬ್ಬಂದಿ ಪುಷ್ಪ ನಮನ ಹಾಗೂ ಗೌರವ ವಂದನೆ ಸಲ್ಲಿಸಿದರು.

ಸಬ್ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಮಾತನಾಡಿ, ಕುಖ್ಯಾತ ವೀರಪ್ಪನ್‌ನನ್ನು ಸೆರೆ ಹಿಡಿಯುವ ಸಲುವಾಗಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಎಸ್ಪಿ ಹರಿಕೃಷ್ಣ ಹಾಗೂ ಇವರ ತಂಡವು ವೀರಪ್ಪನ್ ವಿರುದ್ಧ ವೀರಾವೇಶದಿಂದ ಹೋರಾಡಿದರೂ ಒಳಸಂಚಿನ ಗುಂಡಿನ ದಾಳಿಗೆ ಬಲಿಯಾದುದು ದುರದೃಷ್ಟಕರ. ಇವರ ಧೈರ್ಯ, ಸಾಹಸ ಮೆಚ್ಚುವಂತಹದ್ದಾಗಿದೆ. ಈ ದೆಸೆಯಲ್ಲಿ ಇವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಹುತಾತ್ಮರ ಕಾರ್ಯವೈಖರಿಯನ್ನು ಮನದಟ್ಟು ಮಾಡಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸುವುದರ ಮೂಲಕ ಸಾಧನೆಗೈಯ್ಯಬೇಕು, ಇಲಾಖೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು. ಸಬ್ ಇನ್ಸ್‌ಪೆಕ್ಟರ್ ಈಶ್ವರ್, ಎಎಸ್ಸೈ ಗುರುಸ್ವಾಮಿ, ಸಿಬ್ಬಂದಿ ಮಂಜು, ಕುಮಾರಸ್ವಾಮಿ, ಮಹೇಂದ್ರ, ಬಿರಾದಾರ್, ಮಣಿ, ರಾಮಕೃಷ್ಣ, ಶೋಭಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net