ಹಾಸ್ಟೆಲ್ ನಿರ್ವಹಣೆಯಿಂದ ಮೈಸೂರು ವಿಶ್ವವಿದ್ಯಾಲಯ ಮುಕ್ತಿ?: ವಿದ್ಯಾರ್ಥಿನಿಲಯಗಳ ಮೇಲುಸ್ತುವಾರಿ ಸಮಾಜ ಕಲ್ಯಾಣ ಇಲಾಖೆ ತೆಕ್ಕೆಗೆ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಮೈಸೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳ ನಿರ್ವಹಣೆಯಿಂದ ವಿಮುಕ್ತವಾಗುತ್ತಿದ್ದು, ಇದನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡುವ ಕುರಿತು ಗಂಭೀರವಾಗಿ ಆಲೋಚಿಸಲಾಗುತ್ತಿದೆ. ಇದು ಕಾರ್ಯಗತವಾದರೆ ವಿದ್ಯಾರ್ಥಿಗಳಿಗೂ ಅನುಕೂಲ, ವಿವಿಗೂ ಆರ್ಥಿಕ ಹೊರೆ ತಗ್ಗಲಿದೆ!

ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಪ್ರಯೋಗ ಫಲ ಕೊಟ್ಟಿದೆ. ಇದು ಮೈಸೂರು ವಿಶ್ವವಿದ್ಯಾಲಯದಲ್ಲೂ ಅನುಷ್ಠಾನಗೊಳಿಸಲು ಪ್ರಯತ್ನಗಳು ನಡೆದಿವೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಇದು ಜಾರಿಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ವರದಿ ಸಿದ್ಧ:

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಮೈವಿವಿ, ತನ್ನ ಹಾಸ್ಟೆಲ್‌ಗಳ ನಿರ್ವಹಣೆಗೆ ಏದುಸಿರು ಬಿಡುತ್ತಿದೆ. ಸಿಬ್ಬಂದಿ ಕೊರತೆಯೂ ತೀವ್ರವಾಗಿ ಕಾಡುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅದು ಮುಂದಾಗಿದ್ದು, ಹಾಸ್ಟೆಲ್ ಮೇಲುಸ್ತುವಾರಿಯನ್ನು ಅನ್ಯರಿಗೆ ಹಸ್ತಾಂತರಿಸಲು ಉತ್ಸಕವಾಗಿದೆ.

ಈ ಸಂಬಂಧ ಮೈವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಸಿ.ಗುರುಸಿದ್ದಯ್ಯ ನೇತೃತ್ವದಲ್ಲಿ ವರದಿ ಸಹ ತಯಾರು ಮಾಡಲಾಗಿದೆ. ಮೊದಲು ವಿವಿ ವಿದ್ಯಾರ್ಥಿನಿಲಯಗಳ ಆಡಳಿತ, ನಿರ್ವಹಣೆ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಲಹಾ ಸಮಿತಿಯ ಸಭೆಯಲ್ಲಿ ಈ ವಿಷಯವನ್ನು ಮಂಡನೆ ಮಾಡಿ ಸಾಧಕ-ಬಾಧಕ ಕುರಿತು ಪರಿಶೀಲಿಸಲಾಗುತ್ತದೆ.

ಬಳಿಕ ಸಿಂಡಿಕೇಟ್, ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಾರ್ಯೋನ್ಮುಖವಾಗಿದೆ. ಇದು ಜಾರಿಯಾಗಬೇಕಾದರೆ ಸರ್ಕಾರದ ಅನುಮತಿ ದೊರೆಯಬೇಕು. ಬಳಿಕವೇ ಮೈವಿವಿ ಮತ್ತು ಸಮಾಜ ಕಲ್ಯಾಣ ಇಲಾಖೆ ನಡುವೆ ಒಡಂಬಡಿಕೆಯಾಗಲಿದೆ.

ವಿವಿ, ವಿದ್ಯಾರ್ಥಿಗಳಿಗೂ ಲಾಭ

ಮೈವಿವಿ ಅಧೀನದಲ್ಲೇ ಹಾಸ್ಟೆಲ್‌ಗಳ ಕಟ್ಟಡಗಳೂ ಇರಲಿವೆ. ಆದರೆ, ಅವುಗಳ ನಿರ್ವಹಣೆ ಮಾತ್ರ ಸಮಾಜ ಕಲ್ಯಾಣ ಇಲಾಖೆಗೆ ವಹಿಸಲಾಗುತ್ತದೆ. ಹೀಗೆ ಮಾಡುವುದರಿಂದ ರಾಜ್ಯ ಸರ್ಕಾರದಿಂದ ನೇರವಾಗಿ ಅನುದಾನ ದೊರೆಯಲಿದೆ. ಇದರ ಫಲವಾಗಿ ಹಾಸ್ಟೆಲ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಿ, ಆಡಳಿತ ನಿರ್ವಹಣೆಗೂ ಅನುಕೂಲವಾಗಿ ವಿದ್ಯಾರ್ಥಿಗಳಿಗೂ ಲಾಭವಾಗಲಿದೆ. ಅವರಿಗೆ ಉತ್ತಮ ಸವಲತ್ತುಗಳೂ ಸಿಗಲಿದೆ ಎಂಬ ಆಶಯ ಹೊಂದಲಾಗಿದೆ.

ದುರಸ್ತಿ, ಸುಧಾರಣೆ, ಹೊಸ ಸೌಲಭ್ಯ

109 ವರ್ಷ ಪೂರೈಸಿರುವ ಮೈವಿವಿಯಷ್ಟೇ ಹಾಸ್ಟೆಲ್‌ಗಳ ಕಟ್ಟಡಗಳೂ ಹಳೆಯದಾಗಿವೆ. 80-70 ವರ್ಷ ಪುರಾತನ ಹಾಸ್ಟೆಲ್‌ಗಳು ನಿರ್ವಹಣೆ ಕೊರತೆಯಿಂದ ಸೊರಗಿವೆ. ದುರಸ್ತಿ, ಸುಧಾರಣೆ, ಹೊಸ ಸೌಲಭ್ಯ ತುರ್ತಾಗಿ ಕಲ್ಪಿಸಿಕೊಡಬೇಕಿದೆ. ಇದಕ್ಕಾಗಿ ದೊಡ್ಡ ಮಟ್ಟ ಅನುದಾನದ ಅಗತ್ಯತೆ ಇದೆ. ಇಷ್ಟು ಹಣವನ್ನು ಭರಿಸುವಷ್ಟು ಆರ್ಥಿಕ ಶಕ್ತಿ ವಿವಿಗೆ ಇಲ್ಲ. ಆಡಳಿತ ವೆಚ್ಚವೂ ದುಬಾರಿಯಾಗಿದೆ.

ಹೀಗಾಗಿ, ವಿದ್ಯಾರ್ಥಿನಿಲಯಗಳ ನಿರ್ವಹಣೆ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಯಾದರೆ ಮೈವಿವಿಗೆ ಲಾಭ. ಇದರಿಂದ ಬೋಧನೆ, ಸಂಶೋಧನೆ ಕಡೆಗೆ ಹೆಚ್ಚಿನ ಒತ್ತು ನೀಡಲು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇಲಾಖೆಗೆ ನಿರ್ವಹಣೆ ಕಷ್ಟಕರವಲ್ಲ

ಸದ್ಯಕ್ಕೆ ಮೈವಿವಿ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ, ಊಟದ ವೆಚ್ಚಕ್ಕಾಗಿ ಪ್ರತಿ ತಿಂಗಳು 300 ರೂ. ನೀಡಲಾಗುತ್ತದೆ. ರಾಜ್ಯಾದ್ಯಂತ ನೂರಾರು ಹಾಸ್ಟೆಲ್‌ಗಳ ನಿರ್ವಹಣೆ ಮಾಡುವ ಈ ಇಲಾಖೆಗೆ ಮೈವಿವಿಯ 17 ಹಾಸ್ಟೆಲ್‌ಗಳ ನಿರ್ವಹಣೆ ಕಷ್ಟಕರವಾಗುವುದಿಲ್ಲ.

ಈ ಹಾಸ್ಟೆಲ್‌ಗಳಲ್ಲಿ ಯುವರಾಜ ಕಾಲೇಜು, ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮೈವಿವಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ. ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೆ ದಾಖಲಾತಿ ಇಲ್ಲಿಲ್ಲ. ಆದರೆ, ಸಮಾಜ ಕಲ್ಯಾಣ ಇಲಾಖೆಗೆ ವಹಿಸಿದ ಬಳಿಕ ಈ ಹಾಸ್ಟೆಲ್‌ಗಳಲ್ಲಿ ಬೇರೆ ಕಾಲೇಜಿನ ವಿದ್ಯಾರ್ಥಿಗಳೂ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಇದರಿಂದ ವಿವಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದುವೇ ದೊಡ್ಡ ಸವಾಲಿನ ಕೆಲಸ.

17 ಹಾಸ್ಟೆಲ್‌ನಲ್ಲಿ 3800 ವಿದ್ಯಾರ್ಥಿಗಳು:

ಮೈವಿವಿ ಅಧೀನದಲ್ಲಿ ಸದ್ಯಕ್ಕೆ 17 ಹಾಸ್ಟೆಲ್‌ಗಳಿವೆ. ತಲಾ ಮೂರು ಪುರುಷರ ಪಿಜಿ(ಸ್ನಾತಕೋತ್ತರ ಪದವಿ), ಯುಜಿ(ಸ್ನಾತಕ ಪದವಿ), 3 ಮಹಿಳಾ ಪಿಜಿ, 6 ಮಹಿಳಾ ಯುಜಿ ಹಾಸ್ಟೆಲ್, ತಲಾ ಒಂದು ಉದ್ಯೋಗಸ್ಥ ಮಹಿಳಾ ವಸತಿ ನಿಲಯ ಮತ್ತು ಒಂದು ಪಿಎಚ್.ಡಿ ಹಾಸ್ಟೆಲ್ ಇದೆ. ಇಲ್ಲಿ ಆಶ್ರಯ ಪಡೆದಿರುವ 3,800 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ವಾಸ್ತವ್ಯದೊಂದಿಗೆ ಭೋಜನದ ವ್ಯವಸ್ಥೆ ವಿವಿಯೇ ಕಲ್ಪಿಸಿಕೊಡುತ್ತದೆ.

ವರ್ಷಕ್ಕೆ 22 ಕೋಟಿ ರೂ. ಬೇಕು: ವರ್ಷಕ್ಕೆ ಹಾಸ್ಟೆಲ್ ವೆಚ್ಚಕ್ಕಾಗಿ 22 ಕೋಟಿ ರೂ. ಬೇಕು. 16 ಕೋಟಿ ರೂ. ನಿರ್ವಹಣೆ, ಸಿಬ್ಬಂದಿ ವೇತನ ಇನ್ನಿತರ ಕೆಲಸಕ್ಕೆ 8 ಕೋಟಿ ರೂ.ಬೇಕಾಗುತ್ತದೆ. ವಿವಿ ಎಲ್ಲ ಸಿಬ್ಬಂದಿಯ ವೇತನ (169 ಕೋಟಿ ರೂ.), ಪಿಂಚಣಿ(157 ಕೋಟಿ ರೂ.), ಕ್ಯಾಂಪಸ್ ನಿರ್ವಹಣೆ(23 ಕೋಟಿ ರೂ.) ಬಳಿಕ ಹಾಸ್ಟೆಲ್ ನಿರ್ವಹಣಾ ವೆಚ್ಚವೇ ದೊಡ್ಡದಾಗಿದೆ. ಇದನ್ನು ಸರಿದೂಗಿಸಿಕೊಂಡು ಹೋಗಲು ವಿವಿ ಒದ್ದಾಡುತ್ತಿದೆ.

ಹಾಸ್ಟೆಲ್‌ಗಳಿಗೂ ಸಿಬ್ಬಂದಿ ಕೊರತೆ

ಬೋಧಕ-ಬೋಧಕೇತರ ಕೊರತೆಯಿಂದ ನಲುಗಿರುವ ಮೈವಿವಿ ಹಾಸ್ಟೆಲ್‌ಗಳಿಗೂ ಸಿಬ್ಬಂದಿ ಅಭಾವದ ಕಾಟ ಕಾಡುತ್ತಿದೆ. ವಾರ್ಡನ್ ಸೇರಿದಂತೆ ಪೂರ್ಣಕಾಲಿಕ ಸಿಬ್ಬಂದಿಯೇ ಇಲ್ಲ. ಹೀಗಾಗಿ, ಬೋಧಕ ಸಿಬ್ಬಂದಿಯನ್ನೇ ಹಾಸ್ಟೆಲ್ ನಿರ್ವಹಣಾ ಕೆಲಸಗಳಿಗೆ ನಿಯೋಜಿಸಲಾಗಿದೆ.

ಅವರು ತರಗತಿಯ ಕೆಲಸ ಮುಗಿಸಿ ಬಿಡುವಿನ ಸಮಯದಲ್ಲಿ ಹಾಸ್ಟೆಲ್ ಕಡೆಗೆ ಮುಖ ಹಾಕುತ್ತಾರೆ. ಹೀಗಾಗಿ, ಹಾಸ್ಟೆಲ್ ನೋಡಿಕೊಳ್ಳುವ ಕೆಲಸವೂ ಪರಿಣಾಮಕಾರಿಯಾಗುತ್ತಿಲ್ಲ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ ವಹಿಸಿದರೆ ಅವರದ್ದೇ ಸಿಬ್ಬಂದಿಯ ಮೂಲಕ ಹಾಸ್ಟೆಲ್‌ಗಳನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಾರೆ ಎಂಬುದು ಪ್ರಾಧ್ಯಾಪಕರೊಬ್ಬರ ಮಾತು.

ಹಾಸ್ಟೆಲ್‌ವೊಂದರಲ್ಲಿ ಈ ಪ್ರಯೋಗ ಜಾರಿ

ಈಗಾಗಲೇ ಈ ಪ್ರಯೋಗ ಮೈವಿವಿಯಲ್ಲೂ ಚಾಲ್ತಿಯಲ್ಲಿ ಇದೆ. ಮಾನಸಗಂಗೋತ್ರಿಯಲ್ಲಿ ಕಾಫಿ ಬೋರ್ಡ್ ಬಳಿ ಇರುವ ಹಾಸ್ಟೆಲ್‌ವೊಂದನ್ನು ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಮೈವಿವಿ ವಿದ್ಯಾರ್ಥಿಗಳಿಗೆ, ಪ್ರವೇಶಾತಿ ಪಡೆದಿರುವ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ.

ಮೈವಿವಿ ಹಾಸ್ಟೆಲ್‌ಗಳ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸುವುದರಿಂದ ಲಾಭ-ನಷ್ಟವೇ ಏನು?

ಸಾಧಕ

* ಸರ್ಕಾರದಿಂದ ನೇರ ಅನುದಾನ * ಆಡಳಿತ ಸುಧಾರಣೆ * ಹಾಸ್ಟೆಲ್‌ಗಳ ವ್ಯವಸ್ಥೆಯಲ್ಲಿ ಬದಲಾವಣೆ * ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿ, ಅಭಿವೃದ್ಧಿ * ಪ್ರತ್ಯೇಕ ಸಿಬ್ಬಂದಿ ನಿಯೋಜನೆ * ಮೈವಿವಿಗೆ ತಗ್ಗಲಿದೆ ಆರ್ಥಿಕ ಹೊರೆ * ಸಿಬ್ಬಂದಿ ಕೊರತೆಯೂ ನಿವಾರಣೆ

ಬಾಧಕ

* ಮೈವಿವಿ ಹಾಸ್ಟೆಲ್‌ಗಳಿಗೆ ಬೇರೆ ಕಾಲೇಜಿಗಳ ವಿದ್ಯಾರ್ಥಿಗಳ ಪ್ರವೇಶಾತಿ

* ಮೈವಿವಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ

* ನಿರ್ವಹಣೆ, ಆಡಳಿತದಲ್ಲಿ ಮೈವಿವಿ ಹಿಡಿತ ಸಡಿಲ

* ವಿವಿ ಸ್ವಾಯತ್ತತೆಗೆ ಧಕ್ಕೆಯಾಗುವ ಸಾಧ್ಯತೆ

* ಸರ್ಕಾರ, ಇಲಾಖೆ ಮಧ್ಯಪ್ರವೇಶಕ್ಕೆ ಸುಲಭ ದಾರಿ

ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಹಾಸ್ಟೆಲ್‌ಗಳ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆ ವಹಿಸುವ ಸಂಬಂಧ ಈಗಾಗಲೇ ವರದಿ ತಯಾರು ಮಾಡಲಾಗಿದೆ. ವಿವಿ ವಿದ್ಯಾರ್ಥಿನಿಲಯಗಳ ಸಲಹಾ ಸಮಿತಿಯ ಸಭೆಯಲ್ಲಿ ಮೊದಲು ಚರ್ಚಿಸಲಾಗುವುದು. ನಂತರ ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಂಡಿಸಲಾಗುತ್ತದೆ. ಅಲ್ಲಿ ತೆಗೆದುಕೊಳ್ಳುವ ನಿರ್ಣಯ ಪ್ರಕಾರ ಮುಂದುವರಿಯಲಾಗುತ್ತದೆ. ಪ್ರೊ.ಸಿ.ಗುರುಸಿದ್ದಯ್ಯ, ನಿರ್ದೇಶಕ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ಮೈವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net