

ಹಾಸನ: ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಹಾಸನ ನಗರ ವ್ಯಾಪ್ತಿಯ 30 ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು 30 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಉನ್ನತೀಕರಿಸಲು ವಿಶೇಷ ಹಾಗೂ ಹೆಚ್ಚುವರಿ ಅನುದಾನ ನೀಡಬೇಕೆಂದು ಕಳೆದ ಮೇ 28 ರಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭೆ ಸದಸ್ಯರಾದ ಎಚ್.ಡಿ.ದೇವೇಗೌಡರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ನಿಮ್ಮ ಕೋರಿಕೆಯಂತೆ ಅನುದಾನ ಬಿಡುಗಡೆಗೆ ಅನುಮತಿ ನೀಡುವ ಭರವಸೆ ನೀಡಿ ಕಳೆದ ಜೂ.6 ರಂದು ದೇವೇಗೌಡರಿಗೆ ಸಚಿವರು ಮರು ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಸಹ, ಮೇ 23 ರಂದು ದೇವೇಗೌಡರಿಗೆ ಪತ್ರ ಬರೆದು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ 37 ಹಳ್ಳಿಗಳು ಸೇರ್ಪಡೆ ಆಗಿವೆ. ಆ ಎಲ್ಲ ಹಳ್ಳಿಗಳಿಗೆ ಅತ್ಯಗತ್ಯವಾಗಿ ಬೇಕಿರುವ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ ಇತ್ಯಾದಿ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಅದಕ್ಕಾಗಿ ಹೆಚ್ಚುವರಿಯಾಗಿ ಸಿಆರ್‌ಎಫ್ ನಿಧಿಯಿಂದ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಹಾಸನ ಜನತೆಯ ಪರವಾಗಿ ಪತ್ರ ಬರೆದು ಮನವಿ ಮಾಡಿದ್ದರು.
ರಾಜ್ಯ ಸರ್ಕಾರಕ್ಕೂ ಪತ್ರ
ಇದಕ್ಕೂ ಮುನ್ನ ಇದೇ ದೇವೇಗೌಡರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಸ್ವರೂಪ್ ಪ್ರಕಾಶ್, ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಸುತ್ತಮುತ್ತಲಿನ 25 ಗ್ರಾಮಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡಿರುವುದರಿಂದ ಸದರಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಡಬೇಕೆಂದು ಕೋರಿದ್ದರು. ಈ ಪತ್ರ ಆಧರಿಸಿ ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಜತೆಗೆ ಸ್ವರೂಪ್ ಪ್ರಕಾಶ್ ಅವರ ಪತ್ರ ಲಗತ್ತಿಸಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು. ಕೋರಿ ಪತ್ರ ಬರೆದ ನಂತರ ಪ್ರಸ್ತಾವನೆಗೆ ನಿಯಮಾನುಸಾರ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶನಾಲಯಕ್ಕೆ ಸಿಎಂ ಸೂಚನೆ ನೀಡಿದ್ದರು.
ಹಿರಿಯರಾದ ದೇವೇಗೌಡರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರಗಳಿಗೆ ಸ್ಪಂದನೆ ಸಿಕ್ಕಿರುವುದಕ್ಕೆ ನಗರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯ ಮತ್ತು ಕೇಂದ್ರದಿಂದ ಕೋರಿರುವ ಅನುದಾನ ಬಿಡುಗಡೆ ಆದರೆ ಮಹಾನಗರ ಪಾಲಿಕೆಗೆ ಹೊಸ ರೂಪ ಬರಲಿದೆ. ಶೀಘ್ರ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದ್ದು, ಇದಕ್ಕಾಗಿ ದೇವೇಗೌಡರು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಶಾಸಕ ಸ್ವರೂಪ್‌ಪ್ರಕಾಶ್ ಧನ್ಯವಾದ ತಿಳಿಸಿದ್ದಾರೆ.