ಸ್ವಯಂ ಉದ್ಯೋಗ ಕೈಗೊಳ್ಳಲು ಜನಸಾಮ್ಯಾನರಿಗೆ ಅರಿವು ಮೂಡಿಸಿ: ಡಿಸಿ

ಸ್ವಯಂ ಉದ್ಯೋಗ ಕೈಗೊಳ್ಳಲು ಜನಸಾಮ್ಯಾನರಿಗೆ ಅರಿವು ಮೂಡಿಸಿ: ಡಿಸಿ
Published on

ಹಾಸನ: ಸರ್ಕಾರಿ ಸೌಲಭ್ಯ ಪಡೆದುಕೊಂಡು ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಜನಸಾಮ್ಯಾನರಿಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಿ.ಎಂ.ವಿಶ್ವಕರ್ಮ ಯೋಜನೆಯ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದ ಅವರು ಕುಶಲಕಮಿಗಳನ್ನು ಬಲಪಡಿಸುವುದು ಹಾಗೂ ಅವರ ಕೌಶಲ್ಯವನ್ನು ಹೆಚ್ಚಿಸಲು ಅನುವಾಗುವಂತೆ ಸೂಕ್ತವಾದ ತರಬೇತಿ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಮರಗೆಲಸ, ದೋಣಿ ತಯಾರಿಸುವವರು, ಶಸ್ತ್ರ ತಯಾರಿಕೆ, ಕಮ್ಮಾರ ವೃತ್ತಿ, ಗಾರೆ ಕೆಲಸ, ಬುಟ್ಟಿ, ಚಾಪೆ, ಕಸಪೊರಕೆ ತಯಾರಕರು, ಸಾಂಪ್ರದಾಯಿಕ ಗೊಂಬೆ ಮತ್ತು ಮಕ್ಕಳ ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ದೋಬಿ(ಅಗಸರು), ಆಭರಣ ತಯಾರಕರು, ಟೈಲರಿಂಗ್, ಕುಂಬಾರ ವೃತ್ತಿ ,ಮೀನು ಬಲೆ ಹೆಣೆಯುವವರು, ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ), ಚಮ್ಮಾರ-ಪಾದರಕ್ಷೆ ತಯಾರಕರು ಹಾಗೂ ಬೀಗ ತಯಾರಕರು ಸೇರಿದಂತೆ ಒಟ್ಟು 18 ರೀತಿಯ ವೃತ್ತಿ ಮಾಡುವವರು ಈ ಯೋಜನೆಯಡಿ ಆಧಾರರಹಿತ ಸಾಲವನ್ನು ಶೇ.5 ರ ಬಡ್ಡಿದರದಲ್ಲಿ ವಿವಿಧ ಬ್ಯಾಂಕುಗಳ ಮೂಲಕ ಪಡೆದು ಸ್ವಯಂ ಉದ್ಯೋಗ ಮಾಡಬಹುದಾಗಿದೆ ಎಂದರು.
ಕುಶಲಕರ್ಮಿಗಳು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳುವಂತೆ ತಿಳುವಳಿಕೆ ನೀಡಿ ಎಂದರಲ್ಲದೆ, ಕಡಿಮೆ ಬಂಡವಾಳದಿಂದ ಹೆಚ್ಚು ಗಳಿಕೆ ಮಾಡಬಹುದು ಜೊತೆಗೆ ಇತರರಿಗೂ ಉದ್ಯೋಗ ನೀಡಬಹುದಾಗಿದೆ ಎಂಬುದನ್ನು ಮನವರಿಕೆ ಮಾಡುವಂತೆ ತಿಳಿಸಿದರು.
ಕುಶಲ ಕರ್ಮಿಗಳು ತಮ್ಮಲ್ಲಿರುವ ಕೌಶಲ್ಯವನ್ನು ಪರಿಚಯಿಸಿಕೊಳ್ಳುವುದರ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು. ಮಕ್ಕಳು ಓದುವ ಹಂತದಲ್ಲಿಯೇ ವಿದ್ಯಾಭ್ಯಾಸದ ಜೊತೆಗೆ ದುಡಿಯುವ ಪ್ರವೃತ್ತಿಯನ್ನು ಬೆಳಸಿಕೊಳ್ಳುವಂತೆ ತಯಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಬಿತ್ತಿ ಪತ್ರ ಬಿಡುಗಡೆ ಮಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ವಿಜಯ್‌ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಾಯಿತ್ರಿದೇವಿ, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net