

ಬೆಂಗಳೂರು: ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಸಲಹೆ-ಸೂಚನೆಗಳ ಮಹಾಪೂರವೇ ಹರಿದುಬಂದಿದ್ದು, ಸ್ವಚ್ಛ ಬೆಂಗಳೂರು ವಿಭಾಗಕ್ಕೆ 10,479 ಸಲಹೆಗಳ ಸುರಿಮಳೆಯಾಗಿದೆ.
ಜ್ಞಾನಭಾರತಿ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಘನತ್ಯಾಜ್ಯ ನಿರ್ವಹಣೆ ಪಾಲುದಾರ ಸಭೆ’ಯಲ್ಲಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಸಹಯೋಗದಲ್ಲಿ ಬೆಂಗಳೂರು ವಿವಿ ಪರಿಸರವಿಜ್ಞಾನ ವಿಭಾಗದವರು ಸಲಹೆಗಳನ್ನು ಬೇರ್ಪಡಿಸಿ ವರದಿ ಸಿದ್ಧಪಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ನಾಗರಿಕರಿಂದ ಬಂದಿರುವ ಸಲಹೆಗಳ ಬಗ್ಗೆ ಪರಿಸರವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವಿಚಾರಸಂಕಿರಣದಲ್ಲಿ ಬಂದ ಸಲಹೆಗಳು ಹಾಗೂ ನಾಗರಿಕರ ಸಲಹೆಗಳನ್ನು ಕ್ರೋಢೀಕರಿಸಿ ಅಧ್ಯಯನ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
ಬೆಂಗಳೂರು ವಿವಿ ರಿಜಿಸ್ಟ್ರಾರ್ ಶೇಖ್ ಲತೀಫ್ ಮಾತನಾಡಿ, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸ್ವಚ್ಛ ಬೆಂಗಳೂರು ವಿಭಾಗಕ್ಕೆ ನಮ್ಮ ವಿವಿ ಶೈಕ್ಷಣಿಕ ಪಾಲುದಾರ. ಘನತ್ಯಾಜ್ಯ ನಿರ್ವಹಣೆ ಕರ್ತವ್ಯ ಪಾಲಿಕೆ ಮಾತ್ರವಲ್ಲದೆ ಎಲ್ಲರೂ ಮೂಲದಲ್ಲಿ ಹಸಿ ಮತ್ತು ಒಣ ಕಸಿ ವಿಗಂಡಿಸಿದರೆ ‘ಸ್ವಚ್ಛ ಬೆಂಗಳೂರು’ ರೂಪುಗೊಳ್ಳಲಿದೆ. ಮನೆಯಲ್ಲಿ ಉತ್ಪತ್ತಿಯಾಗುವ ರಸ್ತೆಬದಿ ಮತ್ತು ಖಾಲಿ ಜಾಗದಲ್ಲಿ ಕಸ ಬಿಸಾಡುವುದನ್ನು ತಡೆಯಬೇಕು ಎಂದು ಸಲಹೆ ನೀಡಿದರು. ಘನತ್ಯಾಜ್ಯ ವಿಭಾಗದ ಜಂಟಿ ಆಯಕ್ತ ಧರ್ಮಪಾಲ್, ಪರಿಸರ ವಿಜ್ಞಾನ ವಿಭಾಗದ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಇತರರಿದ್ದರು.
ಮೂಲದಲ್ಲೇ ಸಂಸ್ಕರಣೆ ಅಗತ್ಯ: ರಾಜಧಾನಿಯಲ್ಲಿ ಅಂದಾಜು 1.4 ಕೋಟಿ ಲಕ್ಷ ಜನಸಂಖ್ಯೆಯಿದ್ದು, ನಿತ್ಯ 5,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡದಿದ್ದಲ್ಲಿ ಮುಂದಿನ 15 ವರ್ಷಗಳಲ್ಲಿ 12 ಸಾವಿರ ಮೆ.ಟನ್ ಕಸ ಉತ್ಪತ್ತಿಯಾಗಲಿದೆ. ಆದ್ದರಿಂದ, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕ, ತ್ಯಾಜ್ಯ ಸಂಸ್ಕರಣಾ ಘಟಕ, ವೇಸ್ಟ್ ಟು ಎನರ್ಜಿ ಘಟಕ ಹಾಗೂ ಬಯೋ ಸಿಎನ್‌ಜಿ ಸಂಸ್ಥೆಯು ಮೂಲದಲ್ಲಿಯೇ ಸಂಸ್ಕರಣೆ ಮಾಡುವುದರಿಂದ ಸಮಸ್ಯೆ ಬಗೆಹರಿಸಬಹುದು ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಮುಖ್ಯ ಪ್ರಧಾನ ಅಭಿಯಂತರ ಬಸವರಾಜ್ ಕಬಾಡೆ ವಿವರಿಸಿದರು.
ಏನೇನು ಸಲಹೆಗಳು?
* ಮೂಲದಲ್ಲೇ ತ್ಯಾಜ್ಯ ವಿಂಗಡಿಸಿ
* ತ್ಯಾಜ್ಯದಿಂದ ವೇಸ್ಟ್ ಟು ಎನರ್ಜಿಯಾಗಿ ಪರಿವರ್ತಸಿ
* ಘನತ್ಯಾಜ್ಯ ನಿರ್ವಹಣೆಯನ್ನು ಕೇಂದ್ರೀಕೃತ, ವಿಕೇಂದ್ರೀಕೃತ ಪದ್ಧತಿಯಲ್ಲಿ ಅಳವಡಿಸಿ
* ತ್ಯಾಜ್ಯ ವಿಲೇವಾರಿ ಬಗ್ಗೆ ಯುವಪೀಳಿಗೆಗೆ ಜಾಗೃತಿ ಮೂಡಿಸಿ
* ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಿ ವೈಜ್ಞಾನಿಕ ನಿರ್ವಹಣೆ ಮಾಡಿ
* ಡೋರ್ ಟು ಡೋರ್ ತ್ಯಾಜ್ಯ ವಿಂಗಡಣೆಗೆ ಲಿಂಕ್ ವರ್ಕರ್ಸ್ ಬಳಸಿಕೊಳ್ಳಿ
* ಆಟೋ ಟಿಪ್ಪರ್‌ಗಳ ಮೇಲೆ ನಿಗಾ ಇಡಿ, ಜಿಪಿಎಸ್ ಅಳವಡಿಸಿ
* ಪ್ರತಿ ವಲಯದಲ್ಲೂ ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪಿಸಿ
* ಎಲ್ಲ ಮನೆಗಳಲ್ಲೂ ತ್ಯಾಜ್ಯ ಸಂಸ್ಕರಣೆ ಪದ್ಧತಿ ಜಾರಿಗೊಳಿಸಿ
* ಪ್ರತಿ ವಾರ್ಡ್‌ನಲ್ಲೂ ಒಣತ್ಯಾಜ್ಯ ಸಂಗ್ರಹಣ ಘಟಕ ತೆರೆಯಿರಿ
* ಸಂಪೂರ್ಣವಾಗಿ ಪ್ಲಾಸ್ಟಿಕ್ ಉತ್ಪನ್ನ ನಿಷೇಧಿಸಿ
* ಅಧಿಕ ಸಂಖ್ಯೆಯಲ್ಲಿ ಶೌಚಗೃಹಗಳನ್ನು ಸ್ಥಾಪಿಸಬೇಕು
* ಘನತ್ಯಾಜ್ಯ ನಿರ್ವಹಣೆಗೆ ಮೂಲಸೌಕರ್ಯ ಕಲ್ಪಿಸಿ
* ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ ಬುಟ್ಟಿ ಅಳವಡಿಸಿ
* ಅವಶ್ಯಕತೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸಿ
* ಸ್ವಚ್ಛತಾ ವಿಭಾಗಕ್ಕೆ ಪೌರಕಾರ್ಮಿಕರನ್ನು ರಾಯಭಾರಿಯಾಗಿ ಮಾಡಿ