More

    ಸಿಐಡಿ ತಂಡದಿಂದ ತನಿಖೆ ಆರಂಭ -ಹರೀಶ್ ಹಳ್ಳಿ ಶಂಕಾಸ್ಪದ ಸಾವಿನ ಪ್ರಕರಣ 

    ದಾವಣಗೆರೆ: ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ವಂಚನೆ ಪ್ರಕರಣದ ಆರೋಪಿ, ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಪ್ರಕರಣದ ತನಿಖೆ ಸೋಮವಾರ ಸಿಐಡಿಗೆ ವರ್ಗವಾಗಿದ್ದು, ಡಿಎಸ್‌ಪಿ ಮಟ್ಟದ ಅಧಿಕಾರಿ ನೇತೃತ್ವದ ನಾಲ್ವರ ತಂಡ ದಾವಣಗೆರೆಗೆ ಆಗಮಿಸಿದೆ.
    ಭಾನುವಾರ ರಾತ್ರಿಯೇ ತಂಡ ಜಿಲ್ಲೆಗೆ ಆಗಮಿಸಿದೆ. ಸೋಮವಾರ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ವಶಪಡಿಸಿಕೊಂಡಿರುವ ತಂಡ, ಹರೀಶ್‌ಹಳ್ಳಿ ಮೃತಪಟ್ಟ ತೋಳಹುಣಸೆ ಸಮೀಪದ ಮೇಲ್ಸೇತುವೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದೆ.
    ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಗ್ರಾಮಾಂತರ ಡಿವೈಎಸ್ಪಿ ಕಚೇರಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದ್ದು ತನಿಖೆ ಮುಂದುವರಿದಿದೆ. ತಂಡದಲ್ಲಿ ಒಬ್ಬರು ಎಎಸ್‌ಐ, ಮುಖ್ಯಪೇದೆ ಮತ್ತು ಪೇದೆ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
    ನಿವೇಶನಗಳ ಅಕ್ರಮ ನೋಂದಣಿ ಮಾಡಿಸಿದ ಆರೋಪದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ, ಪೊಲೀಸರು ವಿಚಾರಣೆಗೆಂದು ಕಾಕನೂರಿನಿಂದ ದಾವಣಗೆರೆಗೆ ಶನಿವಾರ ರಾತ್ರಿ ಕರೆತರುವಾಗ ಆರೋಪಿ ಹರೀಶ್‌ಹಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿ, ಮೇಲ್ಸೇತುವೆಯಿಂದ ಜಿಗಿದು ಮೃತಪಟ್ಟಿದ್ದರು ಎನ್ನಲಾಗಿದೆ. ಮೃತನ ಪತ್ನಿ ಲತಾ, ವಿಚಾರಣೆಗೆ ಕರೆದೊಯ್ದ ಪೊಲೀಸರೇ ಕೊಲೆ ಮಾಡಿದ್ದಾಗಿ ಶಂಕಿಸಿ ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
    * ಸಿಬ್ಬಂದಿ ಅಮಾನತು:
    ಆರೋಪಿ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯ ಪಿಎಸ್‌ಐ ಕೃಷ್ಣಪ್ಪ, ಪೇದೆ ದೇವರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ಆದೇಶಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಪೊಲೀಸ್ ಜೀಪ್ ಚಾಲಕ ಇರ್ಷಾದ್‌ನದ್ದು ಯಾವ ಪಾತ್ರವಿಲ್ಲ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts