ವಿಜಯವಾಣಿ ಸುದ್ದಿಜಾಲ ಕೋಲಾರ
ಸಾರ್ವಜನಿಕರು ಪೌರಪ್ರಜ್ಞೆ ಬೆಳೆಸಿಕೊಳ್ಳಬೇಕು. ಕಸವನ್ನು ಮೂಲದಲ್ಲೇ ಬೇರ್ಪಡಿಸಿ ನೀಡಬೇಕು. ಕಸ ವಿಲೇವಾರಿ ಮಾಡುವ ಕುರಿತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಘಟಕರು ಯಾವ ರೀತಿ ಒಣ ಕಸ ಮತ್ತು ಹಸಿಕಸ ವಿಂಗಡಣೆ ಮಾಡಬೇಕು ಮತ್ತು ಅದರಿಂದ ಸಮಾಜದಲ್ಲಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಕೋಲಾರ ವತಿಯಿಂದ ಮಂಗಳವಾರ ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ ಮಿಷನ್ ೨.೦ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮತ್ತು ಐ.ಇ.ಸಿ ಚಟುವಟಿಕೆಗಾಗಿ ನೇಮಕವಾದ ಸಮುದಾಯ ಸಂಘಟಕರಿಗೆ ಜಿಲ್ಲಾ ಮಟ್ಟದ ಘನ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಘನ ತ್ಯಾಜ್ಯ ನಿರ್ವಹಣೆ ಕುರಿತು ಪೌರಕಾರ್ಮಿಕರಿಗೆ ಕಾರ್ಯಾಗಾರ ಏರ್ಪಡಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಈ ಕಾರ್ಯಾಗಾರವು ಪೌರಕಾರ್ಮಿಕರಿಗೆ ಘನ ತ್ಯಾಜ್ಯ ನಿರ್ವಹಣೆಯ ವಿಧಾನಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಘನ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವುದು, ಘನ ತ್ಯಾಜ್ಯದ ಸುರಕ್ಷಿತ ವಿಲೇವಾರಿಯನ್ನು ಖಚಿತಪಡಿಸುವುದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ಘನ ತ್ಯಾಜ್ಯ ನಿರ್ವಹಣೆಯ ಉದ್ದೇಶಗಲಾಗಿವೆ ಎಂದರು.
ಘನ ತ್ಯಾಜ್ಯವನ್ನು ನಾವು ಯಾವ ರೀತಿ ನಿರ್ವಹಣೆ ಮಾಡಬೇಕು ಮತ್ತು ಅದರಿಂದಾಗುವ ಸಮಸ್ಯೆಗಳು ಹಾಗೂ ಸವಾಲುಗಳು ಏನು ಮತ್ತು ಅದಕ್ಕೆ ನಾವು ಸರ್ಕಾರದ ಅನುದಾನವನ್ನು ಬಳಸಿಕೊಂಡು ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಈ ಕಾರ್ಯಾಗಾರದಲ್ಲಿ ತಿಳಿದುಕೊಳ್ಳಬಹುದು ಎಂದರು.
ಕೇವಲ ಒಂದೇ ದಿನದ ಕೆಲಸವಲ್ಲ:
ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಮಾಡುವುದು ಒಂದು ದಿನದ ಕೆಲಸವಲ್ಲ. ಇದು ಪ್ರತಿನಿತ್ಯ ಮತ್ತೆ ಮತ್ತೆ ಮಾಡುವ ಪ್ರಕ್ರಿಯೆ ಇದಾಗಿರುವುದರಿಂದ ಇದರ ಬಗ್ಗೆ ಹೆಚ್ಚು ಅರಿವು ಪೌರಕಾರ್ಮಿಕರಿಗೆ ಇರುತ್ತದೆ ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಎಲ್ಲ ಸ್ಥಳೀಯ ಸಂಸ್ಥೆಗಳ ಮೇಲಿರುತ್ತದೆ ಎಂದರು.
ಸಾರ್ವಜನಿಕರಲ್ಲಿ ಮನವಿ:
ಈಗಾಗಲೇ ಕೋಲಾರ ನಗರದಲ್ಲಿ ಅನೇಕ ಭಾಗಗಳಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆಗಳೊAದಿಗೆ ಸೇರಿ ಕಸದ ರಾಶಿಯನ್ನು ತುಂಬಿದ್ದ ಸ್ಥಳಗಳಲ್ಲಿ ಕಸವನ್ನು ತೆಗೆಸಿ ರಂಗೋಲಿ ಬಿಡಿಸುವುದು ಮತ್ತು ಇನ್ನಿತರ ಆಕರ್ಷಕ ಬಣ್ಣಗಳೊಂದಿಗೆ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು ಸುಂದರವಾದ ಸ್ಥಳಗಳಾಗಿ ಮಾರ್ಪಡಿಸಿ ಕಸವನ್ನು ಹಾಕಬಾರದು ಎಂದು ನಾಮಫಲಕ ಅಳವಡಿಸುವ ಕೆಲಸವನ್ನು ನಗರಸಭೆ ಮಾಡುತ್ತಿದೆ. ಆದರೆ ಸಾರ್ವಜನಿಕರು ಇದಕ್ಕೆ ಸಹಕಾರ ನೀಡದೆ ಮತ್ತೆ ಅದೇ ಸ್ಥಳದಲ್ಲಿ ಕಸ ಎಸೆಯುವ ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ಸಾರ್ವಜನಿಕರು ಸಹಕರಿಸಿ ತಮ್ಮ ಸುತ್ತಮುತ್ತಲಿನ ಜಾಗವನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಕಸವನ್ನು ನೋಡುವ ದೃಷ್ಟಿಯನ್ನು ಬದಲಾಯಿಸುವ ಕೆಲಸವನ್ನು ಸಮುದಾಯ ಸಂಘಟಕರು ಮಾಡಬೇಕಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಕೆಲಸ ಮಾಡುತ್ತಿರುತ್ತಾರೆ. ಅದನ್ನು ಸಮುದಾಯದ ಸಂಘಟಕರು ಗಮನಿಸಿ ಅವರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಇನ್ನೊಮ್ಮೆ ಕಸ ಎಲ್ಲಿಂದರಲ್ಲಿ ಸುರಿಯದಂತೆ ಮಾಹಿತಿ ನೀಡಬೇಕು ಮತ್ತು ಸ್ಥಳೀಯ ನಗರಸಭೆಯ ಕಸವನ್ನು ಸಂಗ್ರಹಿಸುವ ವಾಹನವು ತಮ್ಮ ಮನೆಗಳ ಬಳಿ ಬಂದಾಗ ಹಸಿ ಕಸ ಮತ್ತು ಒಣಕಸ ಬೇರ್ಪಡಿಸಿ ವಾಹನಕ್ಕೆ ನೀಡಬೇಕು ಎಂಬ ಮಾಹಿತಿಯನ್ನು ಎಲ್ಲಾ ಸಮುದಾಯದ ಸಂಘಟಕರು ತಮಗೆ ನೀಡಿರುವ ವ್ಯಾಪ್ತಿಯ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು ಮತ್ತು ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು ಕಸವನ್ನು ಬೀದಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ಕೋಲಾರ ನಗರಸಭೆಯು ಈಗಾಗಲೇ ನಗರದ ತ್ಯಾಜ್ಯ ವಿಲೇವಾರಿ ಮಾಡಿ ರೈತರಿಗೆ ಬೇಕಾದಂತಹ ಸಾವಯವ ಗೊಬ್ಬರವನ್ನು ಒದಗಿಸಿ ಇದರಿಂದ ನಗರಸಭೆಗೆ ಸಂಪನ್ಮೂಲವು ಬರುತ್ತಿದೆ. ಈ ರೀತಿಯ ಕೆಲಸವನ್ನು ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು ಆದ್ದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳು ಮಾಡಬೇಕಾಗಿದೆ ಎಂದರು.
ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ ಮತ್ತು ಎಇಇ ಶ್ರೀನಿವಾಸ್, ಕೋಲಾರ ನಗರಸಭಾ ಆಯುಕ್ತರಾದ ನವೀನ್ ಚಂದ್ರ, ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ ೦೪ ಕೆ.ಎಲ್.ಆರ್. ೦೨ ಜಿಲ್ಲಾ ಮಟ್ಟದ ಘನ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ ಮುಂತಾದವರಿದ್ದರು.