ಸಾಂಸ್ಕೃತಿಕ ಭವನಕ್ಕೆ ಬಣ್ಣ ಹಚ್ಚಲು ಗಡುವು

JLR ph 4 Aug 19 Bhavna Parishilane-
Published on

ಜಗಳೂರು: ಇಲ್ಲಿನ ಎನ್‌ಜಿಒ ಬಡಾವಣೆಯ ಸಾಂಸ್ಕೃತಿಕ ಭವನಕ್ಕೆ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಅವ್ಯವಸ್ಥೆ ಕಂಡು ಗುತ್ತಿಗೆದಾರನಿಗೆ ತರಾಟೆ ತೆಗೆದುಕೊಂಡರು.
ಕಳೆದ 12 ವರ್ಷಗಳಿಂದಲೂ ಕೆಲ ಗುತ್ತಿಗೆದಾರರು ಸಿಮೆಂಟ್ ಗೋದಾಮು ಮಾಡಿಕೊಂಡು ಕಟ್ಟಡ ಹಾಳು ಮಾಡಿದ್ದರ ಕುರಿತಂತೆ ‘ಸಾಂಸ್ಕೃತಿಕ ಭವನಕ್ಕೆ ಹಿಡಿದ ಗ್ರಹಣ’ ಎಂಬ ಶಿರ್ಷಿಕೆಯಡಿ ಆ.11ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು.
ಮರು ದಿನವೇ ಗುತ್ತಿಗೆದಾರ ಮೇಲ್ನೋಟಕ್ಕೆ ತೆರವುಗೊಳಿದಂತೆ ನಾಟಕವಾಡಿ ಎಲ್ಲರನ್ನು ದಿಕ್ಕು ತಪ್ಪಿಸಿದ್ದ. ಪಪಂ ಸದಸ್ಯ ಮತ್ತೆ ಪರಿಶೀಲಿಸಿದಾಗ ಭವನದೊಳಗೆ ಇನ್ನೂ ನೂರಾರು ಲೋಡ್ ಸಿಮೆಂಟ್ ಚೀಲ ಇರುವ ಸುಳಿವು ಸಿಕ್ಕಿದ್ದು, ಕೂಡಲೇ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ಥಳಕ್ಕಾಗಮಿಸಿ ಗುತ್ತಿಗೆದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಾರದೊಳಗೆ ಭವನಕ್ಕೆ ಬಣ್ಣ ಬಳಿಸಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಪಂ ಸದಸ್ಯ ರಮೇಶ್ ಮಾತನಾಡಿ, ಹಾಳಾಗಿರುವ ಭವನದ ನಷ್ಟ ತುಂಬಿಕೊಡಬೇಕು. ರಾಯಲ್ಟಿ ಕಟ್ಟದೇ ಬೇಕಾಬಿಟ್ಟಿ ಮರಳು, ಜಲ್ಲಿ ಲೋಡ್ ಪಕ್ಕದಲ್ಲಿಯೇ ದಾಸ್ತಾನು ಮಾಡಿದ್ದಾರೆ. ಪಪಂನಿಂದ ನಿರ್ಮಿಸಿದ್ದ ರಸ್ತೆಯನ್ನು ಲಾರಿ ತಂದು ಹಾಳು ಮಾಡಿದ್ದಾರೆ. ಹಾಗಾಗಿ, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಸ್ತೆ ಹಾಳು ಮಾಡಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಶಸಾಪ ಅಧ್ಯಕ್ಷ ಎನ್.ಟಿ. ಎರ‌್ರಿಸ್ವಾಮಿ, ಕಸಾಪ ಅಧ್ಯಕ್ಷೆ ಸುಜಾತಮ್ಮ, ಸಾಹಿತಿ ಡಾ.ಪ್ರಭಾಕರ್ ಲಕ್ಕೋಳ್, ಕಸಾಪ ಕಾರ್ಯದರ್ಶಿ ಮಂಜು, ಗ್ಯಾಸ್ ಓಬಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net