

ಹಗರಿಬೊಮ್ಮನಹಳ್ಳಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಹಳ್ಳಿಯಲ್ಲಿ ಜ.29ರಿಂದ ಫೆ.07ರವರೆಗೆ 7ನೇ ಭಾರತೀಯ ಸಂಸ್ಕೃತಿ ಉತ್ಸವ ಆಯೋಜನೆ ಹಿನ್ನೆಲೆಯಲ್ಲಿ ಜನಜಾಗೃತಿ ರಥಕ್ಕೆ ಮಠಾಧೀಶರಿಂದ ಪಟ್ಟಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಜಾಗೃತಿ ರಥದ ಸಂಚಾಲಕ ರೊಟ್ಟಿ ಕೊಟ್ರಪ್ಪ ಮಾತನಾಡಿ, ಈ ಕಾರ್ಯಕ್ರಮಕ್ಕಾಗಿ ಬೀರನಹಳ್ಳಿಯಲ್ಲಿ 250 ಎಕರೆ ಪ್ರದೇಶದಲ್ಲಿ ಒಂದು ಹೊಸ ನಗರ ಸೃಷ್ಟಿಸಲಾಗಿದೆ. ಅಂದಾಜು 30 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಬೀರನಹಳ್ಳಿಯಲ್ಲಿ ನಡೆಯುವ 7ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಅದ್ಧೂರಿ ತಯಾರಿ ನಡೆದಿದೆ. ನಮ್ಮ ಭಾರತದ ಸಂಸ್ಕೃತಿ ಮೆರೆಯುವ ಕಾರ್ಯಕ್ರಮ ಇದಾಗಿದ್ದು, ಲಕ್ಷಾಂತರ ಜನರು ಭಾಗವಹಿಸುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲೂ ವಿಜಯಯಾತ್ರೆ ಹೊರಟಿದೆ ಎಂದರು.
ಪಟ್ಟಣದ ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸೇಡಂ ತಾಲೂಕಿನಲ್ಲಿ ಕುಂಭಮೇಳ ನೆನಪಿಸುವ ಕಾರ್ಯಕ್ರಮ ಇದಾಗಲಿದೆ. ಇಂತಹ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು. ಎಸ್.ವಿ.ಪಾಟೀಲ್, ಮಂಜುನಾಥ ಸ್ವಾಮಿ, ಕನ್ನಡ ಉಪನ್ಯಾಸಕ ಗುರುಬಸವರಾಜ್, ಪ್ರಸಿದ್ಧಿ ಶಾಲೆಯ ಆಡಳಿತಾಧಿಕಾರಿ ಲಿಂಗುರಾವ್, ಬಿ.ಜಿ.ಬಡಿಗೇರ್, ಸಿಬ್ಬಂದಿ ಇದ್ದರು.